ಯಲ್ಲಾಪುರ: ತಾಲೂಕಿನ ಮಾಗೋಡ ಕಾಲೋನಿಯಲ್ಲಿ 5 ನೇ ವರ್ಷದ ಆಲೆಮನೆ ಹಬ್ಬ ಫೆ.19 ರ ಸಂಜೆ ನಡೆಯಲಿದ್ದು, ಅದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಆಲೆಮನೆ ಹಬ್ಬ ಸಮಿತಿಯ ನೇತೃತ್ವದಲ್ಲಿ ಕಾರ್ಯಕರ್ತರು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಫೆ.19 ರಂದು ಸಂಜೆ 5 ರಿಂದ ರಾತ್ರಿ 11 ರವರೆಗೆ ಆಲೆಮನೆ ಹಬ್ಬ ನಡೆಯಲಿದೆ. ಮಹಾದ್ವಾರಕ್ಕೆ ಇಂದ್ರಪ್ರಸ್ಥ ಎಂದು ಹೆಸರಿಡಲಾಗಿದ್ದು, ಕಬ್ಬಿನಹಾಲು ವಿತರಿಸುವ 5 ಕೌಂಟರ್ ಗಳಿಗೆ ಇಂದ್ರಪ್ರಸ್ಥದ ಪ್ರಮುಖ ನಗರಗಳ ಹೆಸರನ್ನು ಇಡುವ ಮೂಲಕ ಪೌರಾಣಿಕ ಕಲ್ಪನೆ ನೀಡಲಾಗುತ್ತಿದೆ. 8 ಟನ್ ಕಬ್ಬು ತರಿಸಲಾಗುತ್ರಿದ್ದು, ಮೂರು ಗಾಣಗಳ ಮೂಲಕ ಕಬ್ಬಿನಹಾಲು ಸಿದ್ಧಪಡಿಸಿ, 5 ಕೌಂಟರ್ ಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಹಳ್ಳಿಯ ಬಗೆ ಬಗೆಯ ತಿಂಡಿ-ತಿನಿಸುಗಳನ್ನೂ ಸಹ ನೀಡಲಾಗುತ್ತದೆ.
ಕಬ್ಬಿನಹಾಲು ಸಿದ್ಧಪಡಿಸುವುದು, ಕೌಂಟರ್ ಗಳ ಮೂಲಕ ವಿತರಿಸುವುದು, ತಿಂಡಿಗಳನ್ನು ತಯಾರಿಸುವುದು, ಪಾರ್ಕಿಂಗ್ ವ್ಯವಸ್ಥೆ ಹೀಗೆ ವಿವಿಧ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವುದಕ್ಕೆ ಆಲೆಮನೆ ಹಬ್ಬ ಸಮಿತಿಯ ನೂರಾರು ಕಾರ್ಯಕರ್ತರು ಶ್ರಮಿಸಲಿದ್ದಾರೆ.
ಕಬ್ಬಿನ ಹಾಲಿನಿಂದ ಸಿದ್ಧಪಡಿಸಿದ ಬೆಲ್ಲ, ತೊಡದೇವು ಮುಂತಾದ ಖಾದ್ಯಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.
ಪಕ್ಕದ ಗೋವರ್ಧನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಯಕ್ಷ ಗಾನ ವೈಭವ, ಸಂಗೀತ ಕಾರ್ಯಕ್ರಮ, ಯಕ್ಷ ನೃತ್ಯ, ಕೀರ್ತನೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿ ಜಿಲ್ಲೆಯ ವಿವಿಧೆಡೆಯಿಂದ 10 ಸಾವಿರಕ್ಕೂ ಹೆಚ್ಚು ಜನರು ಆಲೆಮನೆ ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ನಶಿಸುತ್ತಿರುವ ಆಲೆಮನೆ ಸಂಪ್ರದಾಯವನ್ನು ಉಳಿಸುವ ಪ್ರಯತ್ನವಾಗಿ, ಹಲವು ವಿಶೇಷತೆಗಳೊಂದಿಗೆ ಆರಂಭವಾದದ್ದು ಮಾಗೋಡ ಆಲೆಮನೆ ಹಬ್ಬ. ಕಳೆದ 4 ವರ್ಷಗಳಿಂದ ಮಾಗೋಡ ಹಾಲು ಉತ್ಪಾದಕರ ಸಹಕಾರಿ ಸಂಘವು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಆಲೆಮನೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು, ವರ್ಷದಿಂದ ವರ್ಷಕ್ಕೆ ಮಾಗೋಡ ಆಲೆಮನೆ ಹಬ್ಬ ಜನಪ್ರಿಯತೆ ಪಡೆಯುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆ, ಸಂಘಟನೆಯ ಶಿಸ್ತು ಪ್ರತಿ ವರ್ಷ ಆಲೆಮನೆ ಹಬ್ಬದ ಯಶಸ್ಸಿಗೆ ಕಾರಣವಾಗುತ್ತಿದೆ. ತಾಲೂಕಿನ ಬೇರೆ ಬೇರೆ ಗ್ರಾಮೀಣ ಭಾಗಗಳಲ್ಲಿಯೂ ಕಳೆದ 2-3 ವರ್ಷಗಳಿಂದ ಆಲೆಮನೆ ಹಬ್ಬ ನಡೆಯುತ್ತಿದ್ದು, ಅವುಗಳಿಗೆಲ್ಲ ಮಾಗೋಡ ಆಲೆಮನೆ ಹಬ್ಬ ಪ್ರೇರಣೆ ಮತ್ತು ಮಾದರಿಯಾಗಿದೆ.
ನರಸಿಂಹ ಭಟ್ಟ ಕುಂಕಿಮನೆ (ಆಲೆಮನೆ ಹಬ್ಬ ಸಮಿತಿಯ ಅಧ್ಯಕ್ಷರು):
- 5 ನೇ ವರ್ಷದ ಆಲೆಮನೆ ಹಬ್ಬಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಸ್ಥಳೀಯ ಕಾರ್ಯಕರ್ತರು ಕಳೆದ 3-4 ದಿವಸಗಳಿಂದ ನಿರಂತರವಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಜಾತಿ, ಮತ, ಪಂಥ ರಹಿತ, ರಾಜಕೀಯದ ರಾಗ-ದ್ವೇಷಗಳಿಲ್ಲದ ಈ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ವಿನಂತಿಸುತ್ತೇನೆ.