• Slide
    Slide
    Slide
    previous arrow
    next arrow
  • ಹೆಸ್ಕಾಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನಗರಸಭೆ ನಿರ್ಧಾರ

    300x250 AD

    ಕಾರವಾರ: ಹೆಸ್ಕಾಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನಗರಸಭೆ ನಿರ್ಧರಿಸಿದ್ದು, ನಗರಸಭೆಯ ವಕೀಲರಿಗೆ ಈ ಬಗ್ಗೆ ಸೂಚಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

    ಮಂಗಳವಾರ ನಗರಸಭೆಯ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸದಸ್ಯ ರವಿರಾಜ ಅಂಕೋಲೆಕರ್ ಮಾತನಾಡಿ, ನಗರಸಭೆಯಲ್ಲೀಗ ಸಾರ್ವಜನಿಕ ನಲ್ಲಿ ವ್ಯವಸ್ಥೆ ಇಲ್ಲ. ಹಾಗಾಗಿ ಪೌರ ಕಾರ್ಮಿಕರಿಂದಲೂ ನೀರಿನ ಕರ ವಸೂಲಿ ಮಾಡಲಾಗುತ್ತಿದೆ. ಆದರೆ, ಹೆಸ್ಕಾಂಗೆ ಸೇರಿದ 16 ಕ್ವಾಟ್ರಸ್‍ಗಳವರು ನಾಲ್ಕು ನಲ್ಲಿಗಳಲ್ಲಿ ನಿಯಮ ಬಾಹಿರವಾಗಿ ನೀರು ಪಡೆಯುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಮೀರಿ ಹೆಸ್ಕಾಂ ಅಂಗನವಾಡಿ, ಸಾರ್ವಜನಿಕ ಶೌಚಗೃಹದ ವಿದ್ಯುತ್ ಸಂಪರ್ಕವನ್ನೂ ಕಡಿತ ಮಾಡುತ್ತದೆ. ಹಾಗಿದ್ದಲ್ಲಿ ಹೆಸ್ಕಾಂ ಬಗ್ಗೆ ನಗರಸಭೆಗೆ ಮೃದು ಧೋರಣೆ ಮಾಡಬಾರದು ಎಂದು ಒತ್ತಾಯಿಸಿದರು.

    ಪೌರಾಯುಕ್ತ ಆರ್.ಪಿ.ನಾಯ್ಕ ಸ್ಪಷ್ಟನೆ ನೀಡಿ, ಪ್ರತಿ ಕ್ವಾಟ್ರಸ್‍ಗೆ ಪ್ರತ್ಯೇಕ ನಲ್ಲಿ ಸಂಪರ್ಕ ಪಡೆದು ಅದರ ಶುಲ್ಕ ಭರಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಓಂ ಲಾಡ್ಜ್ ಎದುರು ರಸ್ತೆ ಪಕ್ಕ ಹಾಗೂ ನವತಾರಾ ಹೋಟೆಲ್ ಎದುರು ನಗರಸಭೆ ಜಾಗದಲ್ಲಿ ಹೆಸ್ಕಾಂ ವಿದ್ಯುತ್ ಪರಿವರ್ತಕ ಅಳವಡಿಸಿದ್ದು, ಅದನ್ನು ತೆರವು ಮಾಡುವಂತೆ ಸಾಕಷ್ಟು ಬಾರಿ ನೋಟಿಸ್ ನೀಡಿದ್ದೇವೆ. ಆದರೂ ಕ್ರಮ ವಹಿಸದ ಕಾರಣ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಗರಸಭೆ ವಕೀಲರಿಗೆ ಸೂಚಿಸಲಾಗಿದೆ ಎಂದರು.

    ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರಾದ ಗಣಪತಿ ನಾಯ್ಕ, ಮಕ್ಬುಲ್ ಶೇಖ್, ಸಂದೀಪ ತಳೇಕರ್, 11 ಸದಸ್ಯರ ಸಮಿತಿಯಲ್ಲಿ ಒಬ್ಬ ಕಾಂಗ್ರೆಸ್ ಸದಸ್ಯರನ್ನು ಮಾತ್ರ ಸೇರಿಸಲಾಗಿದೆ. ಕನಿಷ್ಟ ನಾಲ್ಕು ಸದಸ್ಯರನ್ನು ಸೇರಿಸಿ ಎಂದು ಒತ್ತಾಯಿಸಿದರು. ಅಲ್ಲದೇ, ಸ್ಥಾಯಿ ಸಮಿತಿ ಸಭೆಯಲ್ಲಿ ಚೇರ್ಮನ್ ಆಯ್ಕೆ ಮಾಡುವ ನಿಯಮವಿದೆ. ಅದನ್ನು ಮೀರಿ ಸಾಮಾನ್ಯ ಸಭೆಯಲ್ಲೇ ಚೇರ್ಮನ್ ಹೆಸರು ಘೋಷಣೆ ನಿಯಮ ಬಾಹಿರವಾಗಿದೆ ಎಂದು ಆಕ್ರೋಶ ಹೊರಹಾಕಿದರು. ಮುಂದಿನ ಅವಧಿಯಲ್ಲಿ ಹೆಚ್ಚಿನ ಕಾಂಗ್ರೆಸ್ ಸದಸ್ಯರನ್ನು ಸೇರಿಸಿಕೊಳ್ಳಲಾಗುವುದು ಎಂದು ಅಧ್ಯಕ್ಷ ಡಾ.ಪಿಕಳೆ ಸ್ಪಷ್ಟನೆ ನೀಡಿದರು.

    300x250 AD

    ನಿರ್ಮಾಣ ಹಂತದ ತಾಲೂಕು ಸೌಧದ ಎದುರು ಸಿದ್ಧವಾದ ನಗರಸಭೆ ಉದ್ಯಾನವನಕ್ಕೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹಾಗೂ ಅದೇ ಉದ್ಯಾನವನದ ಶಾಸಕರ ಕಚೇರಿ ಎದುರಿನ ಇನ್ನೊಂದು ಭಾಗಕ್ಕೆ ಮಾಜಿ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ ಅವರ ಹೆಸರಿಡಲು ಸರ್ವಾನುಮತದ ತೀರ್ಮಾನ ವ್ಯಕ್ತವಾಯಿತು. ಯುದ್ಧ ನೌಕಾ ವಸ್ತು ಸಂಗ್ರಹಾಲಯ ವ್ಯಾಪ್ತಿಯಲ್ಲಿ ಶೌಚಗೃಹ ಇಲ್ಲದೇ ತೊಂದರೆಯಾಗುತ್ತಿರುವ ಬಗ್ಗೆ ಸದಸ್ಯ ಪ್ರೇಮಾನಂದ ಗುನಗಾ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ನಗರಸಭೆಯಿಂದ ಶೌಚಗೃಹ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕವಾದ ನಯನಾ ನೀಲಾವರ, ಪ್ರದೀಪ ಗುನಗಿ, ಮಹೇಂದ್ರ ವಿಠ್ಠಲ ಬಾನಾವಳಿ ಹಾಗೂ ಗುರುನಾಥ ದುಮ್ಮಾ ಉಳ್ವೇಕರ್ ಪ್ರಮಾಣ ವಚನ ಸ್ವೀಕರಿಸಿದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮಸೆ, ಸ್ಥಾಯಿ ಸಮಿತಿ ನಿಕಟಪೂರ್ವ ಚೇರ್ಮನ್ ಸಂಧ್ಯಾ ಬಾಡಕರ್ ವೇದಿಕೆಯಲ್ಲಿದ್ದರು.

    ಉದ್ಯಾನವನದಲ್ಲಿ ವಿದ್ಯಾರ್ಥಿಗಳ ಅಶ್ಲೀಲ ವರ್ತನೆ:
    ನಗರಸಭೆ ಪಕ್ಕದ ಗಾಂಧಿ ಉದ್ಯಾನವನ ಹಾಗೂ ಕಡಲ ತೀರದ ಉದ್ಯಾನವನದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಅಶ್ಲೀಲವಾಗಿ ವರ್ತಿಸುತ್ತಿದ್ದು, ಹಿರಿಯ ನಾಗರಿಕರಿಗೆ ಹಾಗೂ ಇನ್ನಿತರರಿಗೆ ಇದರಿಂದ ಮುಜುಗರ ಉಂಟಾಗುವಂತಾಗಿದೆ. ಈ ಬಗ್ಗೆ ನಗರಸಭೆ ಶಿಸ್ತುಕ್ರಮ ಜರುಗಿಸಬೇಕು ಎಂದು ಸರ್ವ ಸದಸ್ಯರು ತಿಳಿಸಿದರು.

    ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಸುಜಾತಾ ತಾಮಸೆ ಆಯ್ಕೆ:
    ಜೆಡಿಎಸ್‍ನ ಸಂಧ್ಯಾ ಬಾಡಕರ್ ಅವರ ಚೇರ್ಮನ್ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಪಕ್ಷೇತರ ಸದಸ್ಯೆ ಸುಜಾತಾ ಸಂತೋಷ ತಾಮಸೆ ಅವರನ್ನು ಚೇರ್ಮನ್ ಆಗಿ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top