ಹೊನ್ನಾವರ: ಇಂದು ಶಾಲಾ ಕಾಲೇಜು ಮಕ್ಕಳು ಹಿಜಾಬ್ ,ಶಾಲು ಟೋಪಿ ಎಂದು ಕಚ್ಚಾಡುತ್ತಾರೆ. ಕೆಲ ಹಿಂದೂ ಹಾಗೂ ಅನ್ಯಮತೀಯ ಗುರುಗಳಿಗೆ ಧರ್ಮ ಎಂದರೇನು ಎನ್ನುವದನ್ನೆ ತಿಳಿದಿಲ್ಲ. ಬಟ್ಟೆಗಳನ್ನೆ ಧರ್ಮ ಎಂದು ನಂಬಿಕೊಂಡಿದ್ದಾರೆ. ಟೋಪಿ,ಕೇಸರಿ ಶಾಲು ಎಂದರೆ ಧರ್ಮವಲ್ಲ ಬದುಕಿನ ನಿಯಮ”. ಜೀವನದ್ದುದಕ್ಕೂ ಬದುಕುವ ಬಗೆಯಾಗಿದೆ. ಹಿಜಾಬ್ ನಡೆ ದೇಶಕ್ಕೆ ಆತಂಕಕಾರಿ ಎಂದು ಉಜಿರಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಗೆರುಸೋಪ್ಪ ಉಪ್ಪಿನಗೊಳಿಯ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ನಗರ ದೇವಿಯ ನೂತನ ಬ್ರಹ್ಮರಥೊತ್ಸವಕ್ಕೆ ಮಂಗಳವಾರ ಚಾಲನೆ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಅವರು ಪ್ರವಚನ ನೀಡಿದರು.
ಧರ್ಮದ ಆಚರಣೆಯ ಬಗ್ಗೆ ಉಲ್ಲೆಖಿಸಿದ ಶ್ರೀಗಳು ಕೇಸರಿ ಬಟ್ಟೆ ಸನ್ಯಾಸವಲ್ಲ. ಧರ್ಮದ ಜಾಗೃತಿ ಮೂಡಿಸುವುದು. ಕೆಲವರು ಬಟ್ಟೆಯನ್ನೆ ಧರ್ಮವೆಂದು ತಿಳಿದಿದ್ದಾರೆ. ಭಗವದ್ಗೀತೆ, ಕುರಾನ್, ಬೈಬಲ್ ಅಂತರಾತ್ಮ ಅರಿತಾಗ ಧರ್ಮದ ಸತ್ಯದರ್ಶನವಾಗಲಿದೆ. ನಾವು ಅನೂಕೂಲತೆಗೆ ತಕ್ಕಂತೆ ವಾದ ಮಂಡಿಸುತ್ತೇವೆ.ಸಾಮರಸ್ಯದ ಜೀವನ ನಡೆಸುವ ಮೂಲಕ ಧರ್ಮಾಚರಣೆ ಮಾಡಬೇಕು ಎಂದರು.
ಭವಿಷ್ಯದ ಭಾರತದ ಬಗ್ಗೆ ಧರ್ಮದ ವಿಷಯದ ಕಚ್ಚಾಟ ಕಳವಳ ಮೂಡಿಸುತ್ತಿದೆ. ನಮ್ಮನ್ನಾಳುವ ನಾಯಕರಿಗೆ ದೇಶಿಯತೆಯು ಬೇಕಿದೆಯೋ ಅಥವಾ ಅಧಿಕಾರವೊ ಎನ್ನುವ ಪ್ರಶ್ನೆ ಮೂಡುತ್ತದೆ. ರಾಷ್ಟ್ರೀಯತೆ, ಸಹೊದರತ್ವದ ಶಕ್ತಿ ಮೂಡಬೇಕು ಅಂದರೆ ಇಂತಹ ಸನ್ನಿವೇಶ ಎದುರಾಗಬಾರದು. ಜನಾಂಗೀಯ ಸಂಘರ್ಷ ಉಂಟಾದಾಗ ದೇಶ ಉಳಿಯುವುದಿಲ್ಲ. ಎಲ್ಲೆಲ್ಲಿ ಮತೀಯ ಸಂಘರ್ಷ ಉಂಟಾಗಿದೆಯೋ ಆ ದೇಶ ಉದ್ದಾರವಾಗಿಲ್ಲ ಎಂದರು.
ದೇಶ ಉದ್ದಾರವಾಗದೇ ಇದ್ದರೂ ಸರಿಯೇ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ನಾನು ಶಾಸಕ, ಸಂಸದ, ಮಂತ್ರಿ ಆಗಬೇಕು ಉದ್ಬವಿಸಿರುವುದು ಇತ್ತಿಚೀನ ಬೆಳವಣೆಗೆಯ ದುರಂತವಾಗಿದೆ. ನಮ್ಮ ರಾಜಕಾರಣಿಗಳಿಗೆ ಯಾವುದೇ ತರಬೇತಿ ಇಲ್ಲ. ಗ್ರಾ.ಪಂ.ಪ್ರತಿನಿಧಿಯಿಂದ ಹಿಡಿದು ಲೋಕಸಭಾ ಸದಸ್ಯರವರೆಗೂ ಪ್ರತಿಯೊರ್ವರು ಅಧಿಕಾರಕ್ಕೆ ಬಂದಾಗ ಸ್ವಾರ್ಥ ಸಾಧನೆ ಹಾಗೂ ಕಿರುಕುಳವನ್ನೆ ಮಾಡುತ್ತಿದ್ದಾರೆ ಎಂದರೆ ಅವರಿಗೆ ಸಂಸ್ಕಾರದ ಕೊರತೆ ಇದೆ ಎಂದರ್ಥ ಎಂದರು.
ನಾವು ಸಂಸ್ಕಾರ ಹಾಗೂ ಸಂಸ್ಕøತಿಯ ಪಾಲಿಸುವ ಮೂಲಕ ಧರ್ಮದ ಉಳಿವಿಗೆ ಪ್ರಯತ್ನ ನಡೆಸಬೇಕೆ ಹೊರತು ಸಂಘರ್ಷದಿಂದ ಅಲ್ಲ ಎಂದು ಇತ್ತೀಚಿನ ಹಿಜಾಬ್ ಬೆಳವಣೆಗೆ ಉಲ್ಲೆಖಿಸಿ ಮಾತನಾಡಿದರು.
ರಾಜಕೀಯಕ್ಕಾಗಿ,ಅಧಿಕಾರಕ್ಕಾಗಿ ಧರ್ಮದ ದುರ್ಬಳಕೆ ಸಲ್ಲದು.ಧರ್ಮ ಎಂದರೆ ಸಹೋದರತೆ,ಪ್ರೀತಿ ಹಂಚುವುದು. ಯಾರಿಗೆ ನೋವು ನೀಡುತ್ತದೆಯೋ ಅದು ಅಧರ್ಮ. ಇಂದು ನಾವು ಹೆಚ್ಚು ಧಾರ್ಮಿಕತೆಯಾಗುವುದು ಅನಿವಾರ್ಯವಾಗಿದೆ. ಸಂಸ್ಕಾರ ಪೂರ್ಣ ಪ್ರಮಾಣದಲ್ಲಿ ಲಭಿಸಿದರೆ ಕುಟುಂಬದ ನಡುವೆ ಬಿರುಕು ಇಲ್ಲ.ಶ್ರದ್ದಾಕೇಂದ್ರಗಳಲ್ಲಿ ಸಂಸ್ಕಾರ ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಜೀವನ ಎಂಬುದು ಒಂದು ಯಜ್ಞದಂತಾಗಬೇಕು ಎಂದರು.
ಗೋವಿಂದ ನಾಯ್ಕ ದಂಪತಿಗಳು ಪೂಜ್ಯ ಶ್ರೀಗಳ ಪಾದಪೂಜೆ ನೆರವೇರಿಸಿದರು.