ಅಂಕೋಲಾ : ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಗಲಿದ ಪ್ರಸಿದ್ದ ಕವಿ ಚನ್ನವೀರ ಕಣವಿಯವರಿಗೆ ಪುಷ್ಪನಮನ ಮತ್ತು ನುಡಿನಮನ ಸಲ್ಲಿಸಲಾಯಿತು. ಪಿ.ಎಮ್.ಪ್ರೌಢಶಾಲೆಯ ರೈತಭವನದಲ್ಲಿ ಆಯೋಜಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಸಾಹಿತಿಗಳು ಹಾಗೂ ಅಭಿಮಾನಿಗಳು ಮೌನಾಚರಣೆಗೈದು ಚನ್ನವೀರ ಕಣವಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶೃದ್ಧಾಂಜಲಿ ಸಲ್ಲಿಸಿದರು.
ಹಿರಿಯ ಸಾಹಿತಿ ವಿಷ್ಣು ನಾಯ್ಕ ಕಣವಿಯವರ ಕವನ ಸಂಕಲನದ ಕೆಲವು ಸಾಲುಗಳನ್ನು ಪ್ರಸ್ತುತಪಡಿಸಿದರು. ಡಾ.ರಾಮಕೃಷ್ಣ ಗುಂದಿ ಮಾತನಾಡಿ ಚನ್ನವೀರ ಕಣವಿಯವರು ಸೃಜನಶೀಲ ಕವಿಗಳಾಗಿದ್ದರು ಸರಳ ನಡೆನುಡಿಗಳಿಂದಾಗಿ ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ ಎಂದರು.
ಪ್ರೊ.ಮೋಹನ ಹಬ್ಬು ಮಾತನಾಡಿ ಚನ್ನವೀರ ಕಣವಿಯವರು ರಚಿಸಿದ ವಿಶ್ವವಿನೂತನ ವಿದ್ಯಾಚೇತನ ಹಾಡು ವಿಶ್ವದಾದ್ಯಂತ ಪಸರಿಸಿದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಈ ಹಾಡನ್ನು ಬಳಸಲಾಗುತ್ತಿದೆ ಎಂದರು.
ಮಹಂತೇಶ ರೇವಡಿ, ಪ್ರಾಚಾರ್ಯ ಫಾಲ್ಗುಣ ಗೌಡ, ಎನ್ ವಿ ನಾಯಕ ಇನ್ನಿತರರು ಮಾತನಾಡಿ ಕಣವಿಯವರಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿ.ಎಮ್.ಹೈಸ್ಕೂಲ್ ಮುಖ್ಯಾಧ್ಯಾಪಕ ಎಮ್.ಎ.ನಾಯ್ಕ, ಕನ್ನಡ ಸಾಹಿತ್ಯಪರಿಷತ್ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ),ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ, ರವೀಂದ್ರ ಕೇಣಿ, ರಾಜೀವ ನಾಯಕ, ಎನ್ ಡಿ ಅಂಕೋಲೆಕರ, ಪ್ರೇಮಾನಂದ ಜೈವಂತ, ಪುಷ್ಪಾ ನಾಯ್ಕ, ರಾಘವೇಂದ್ರ ಮಹಾಲೆ, ಪ್ರಕಾಶ ಕುಂಜಿ, ಅನಂತ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು. ಜಿ.ಆರ್ ತಾಂಡೇಲ ನಿರ್ವಹಿಸಿದರು.