ಅಂಕೋಲಾ: ಪುನೀತ ರಾಜಕುಮಾರ ಅವರ ಅಭಿಮಾನಿಯಾದ ಬೆಂಗಳೂರಿನ ಚೇತನಕುಮಾರ ಇವರು ಸೈಕಲ್ ಮೂಲಕ ಹಲವೆಡೆ ಸಂಚಾರ ನಡೆಸಿ ಪುನೀತ ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಯಲ್ಲಾಪುರ ಮಾರ್ಗವಾಗಿ ಅಂಕೋಲಾಕ್ಕೆ ಆಗಮಿಸಿದ ಇವರು ಮಂಜಗುಣಿಗೆ ತೆರಳಿ ಪುನೀತ ರಾಜಕುಮಾರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ಪುನೀತ ರಾಜಕುಮಾರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ನಾಯ್ಕ ಮಾತನಾಡಿ, ಪುನೀತ ರಾಜಕುಮಾರ ಅವರ ಸಮಾಜ ಸೇವೆಯನ್ನು ಗಮನಿಸಿ ನಮ್ಮ ಗ್ರಾಮದಲ್ಲಿ ಪುನೀತ ಅವರ ಪುತ್ಥಳಿಯನ್ನು ನಿರ್ಮಿಸಿದ್ದೇವೆ. ತಮ್ಮ ಆಗಮನ ಕೂಡ ನಮಗೆ ಖುಷಿ ತಂದಿದೆ ಎಂದು ಚೇತನಕುಮಾರ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿಕೊಂಡರು.
ಚೇತನಕುಮಾರ ಮಾತನಾಡಿ, ಪುನೀತ ರಾಜಕುಮಾರ ಅವರ ಅಪ್ಪಟ ಅಭಿಮಾನಿಯಾದ ನಾನು ರಾಜ್ಯಾದ್ಯಂತ ‘ರೈಡ್ ಫಾರ್ ಅಪ್ಪು’ ಎನ್ನುವ ಹೊಸ ಕಲ್ಪನೆಯೊಂದಿಗೆ ಸೈಕಲ್ ಮೂಲಕವೇ ರಾಜ್ಯಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದೇನೆ. ಅಂಕೋಲಾದ ಮಂಜಗುಣಿಯಲ್ಲಿ ಪುನೀತ ಅವರ ಪುತ್ಥಳಿ ನಿರ್ಮಿಸಿರುವ ವಿಷಯ ತಿಳಿದು ಅದನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಆಗಮಿಸಿದ್ದೇನೆ. ಪ್ರತಿಯೊಬ್ಬರೂ ಇಂತವರ ಸಾಮಾಜಿಕ ಕಾರ್ಯಗಳನ್ನು ನೆನೆಯುತ್ತ ತಾವು ಕೂಡ ಇಂತಹ ಕಾರ್ಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪುನೀತ ರಾಜಕುಮಾರ ಅಭಿಮಾನಿ ಬಳಗದ ಕೋಶಾಧ್ಯಕ್ಷ ಅನೀಲ ಜೆ. ನಾಯ್ಕ, ಉಪಾಧ್ಯಕ್ಷೆ ಲೀಲಾವತಿ ನಾಯ್ಕ, ಪದಾಧಿಕಾರಿಗಳಾದ ಗಣೇಶ ವಿ. ನಾಯ್ಕ, ಸಂತೋಷ ವಿ. ನಾಯ್ಕ, ರವಿ ಎನ್. ನಾಯ್ಕ, ಚಂದ್ರಕಾಂತ ಹರಿಕಂತ್ರ, ಶ್ರೀಕಾಂತ ಹರಿಕಂತ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.