ಅಂಕೋಲಾ: ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ ಅವರ ನಿಧನಕ್ಕೆ ಅಂಕೋಲೆಯ ಹಿರಿಯ ಸಾಹಿತಿಗಳ ಬಳಗವಾದ ‘ಮಿತ್ರ ಸಂಗಮ’ ಕಂಬನಿ ಮಿಡಿದಿದೆ. “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂದು ಹಲವು ದಶಕಗಳ ಕಾಲ ಕನ್ನಡ ಸಾಹಿತ್ಯ ಕೃಷಿ ಮಾಡಿದ ಚೆನ್ನವೀರ ಕಣವಿಯವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಬಾರದ ಹಾನಿಯಾಗಿದೆ ಎಂದು ಹಿರಿಯ ಸಾಹಿತಿ ಮೋಹನ ಹಬ್ಬು ಹೇಳಿದರು.
ಅವರ ಒಡನಾಟದ ದಿನಗಳನ್ನು ಸ್ಮರಿಸಿದರು. ನಿವೃತ್ತ ಪ್ರಾಚಾರ್ಯ ಯಕ್ಷಗಾನ ಕಲಾವಿದ ಡಾ. ರಾಮಕೃಷ್ಣ ಗುಂದಿ ಮಾತನಾಡುತ್ತ ಕಣವಿಯವರು ಭಾವಜೀವಿಯಾಗಿದ್ದರು, ಯಾವ ಪಂಥಕ್ಕೂ ಸೇರದೇ ಮನುಜ ಪಥವನ್ನು ಬೆಂಬಲಿಸಿದರೆಂದರು. ಅವರು ತಮ್ಮ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆಂದರು.
ಡಾ. ವೇರ್ಣೇಕರ ಮಾತನಾಡಿ, ಚನ್ನವೀರ ಕಣವಿಯವರ ಸುನೀತಗಳ ಸಾಮ್ರಾಟರಾಗಿದ್ದರೆಂದರು.
ನಿವೃತ್ತ ಮುಖ್ಯಾಧ್ಯಾಪಕ ಗೋಪಾಲಕೃಷ್ಣ ನಾಯಕ ಮಾತನಾಡಿ, ಕಣವಿಯವರು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದಾರೆಂದರು.
ಸಾಹಿತಿ ಜೆ. ಪ್ರೇಮಾನಂದ ಮಾತನಾಡಿ, ಕಣವಿಯವರ ಭಾವಗೀತೆಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದರು. ಅವರ ಉತ್ತರ ಕನ್ನಡದ ಒಡನಾಟವನ್ನು ನೆನಪಿಸಿಕೊಂಡರು.
ಲೇಖಕ ಮಹಾಂತೇಶ ರೇವಡಿ ಮಾತನಾಡುತ್ತ ಚಂಪಾ ಅವರನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಇನ್ನೊಬ್ಬ ಹಿರಿಯ ಸಾಹಿತಿಗಳನ್ನು ಕಳೆದುಕೊಂಡದ್ದು ನಮ್ಮ ದೌರ್ಭಾಗ್ಯ. ಚಂಬೆಳಕಿನ ಕವಿ ಬಿಟ್ಟು ಹೋದ ಬೆಳಕು ಈ ಜಗವನ್ನು ಸದಾ ಬೆಳಗುತ್ತದೆ ಎಂದರು.