ಶಿರಸಿ: ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಗರದಲ್ಲಿ ಗುರುವಾರವೂ ಕೂಡ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ ಘಟನೆ ಇಲ್ಲಿನ ಎಂ ಎಂ ಕಲಾ ಮತ್ತು ವಿಜ್ಞಾನ ವಿದ್ಯಾಲಯ, ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಬುಧವಾರವಷ್ಟೇ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಸಮವಸ್ತ್ರ ಧರಿಸಿ ಬರುವಂತೆ ತಿಳಿಸಿ ಮನೆಗೆ ಕಳುಹಿಸಲಾಗಿತ್ತು. ಆದರೆ ಗುರವಾರ ಸುಮಾರು 25 ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ಆಗಮಿಸಿ ತರಗತಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿದರು. ಆಗ ಕಾಲೇಜಿನ ಪ್ರಾಚಾರ್ಯ ಹೈ ಕೋರ್ಟ್ ಆದೇಶದ ಪ್ರಕಾರ ಕಾಲೇಜು ನಿಗದಿಪಡಿಸಿದ ಸಮವಸ್ತ್ರದಲ್ಲಿ ಮಾತ್ರ ತರಗತಿಗೆ ಹಾಜರಾಗಬಹುದು ಎಂದು ತಿಳಿಸಿದರು. ಆಗ ಪ್ರಾಚಾರ್ಯರೊಂದಿಗೆ ವಾದಕ್ಕಿಳಿದ ವಿದ್ಯಾರ್ಥಿನಿಯರು ಈ ಹಿಂದೆಯೂ ಹಿಜಾಬ್ ಧರಿಸಿ ಬರುತ್ತಿದ್ದು, ಈಗಲೂ ಬರುತ್ತಿದ್ದೇವೆ. ನ್ಯಾಯಾಲಯ ತಮ್ಮ ಧರ್ಮದ ಪ್ರಕಾರ ಬಟ್ಟೆಧರಿಸುವ ಹಕ್ಕಿದೆ ಎಂದು ವಾದಕ್ಕಿಳಿದರು.
ಆಗ ಮಧ್ಯಪ್ರವೇಶಿದ ಶಿರಸಿ ಡಿಎಸ್‌ಪಿ ರವಿ ಡಿ ನಾಯ್ಕ ಯಾವುದೋ ವಾಟ್ಸಪ್ ಸಂದೇಶ ನೋಡಿ ಇಲ್ಲಿ ಹೇಳುವಂತಿಲ್ಲ. ಹೈ ಕೋರ್ಟ್ ಸಮವಸ್ತ್ರ ನೀತಿ ಪಾಲಿಸುವಂತೆ ಸ್ಪಷ್ಟವಾಗಿ ಆದೇಶಿಸಿದೆ ಎಂದು ಆದೇಶದ ಪ್ರತಿ ತೋರಿಸಿದರು. ಆದರೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗೆ ಹೋಗುವುದಾಗಿ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಆಗಮಿಸಿದ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಹೈ ಕೋರ್ಟ್ ಆದೇಶದ ಪ್ರತಿಯನ್ನು ಓದಿ ವಿದ್ಯಾರ್ಥಿನಿಯರಿಗೆ ತಿಳಿಸಲು ಮುಂದಾದರೂ, ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ತೆಳಲು ನಿರಾಕರಿಸಿ ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದಿನ ಆದೇಶ ಬರುವ ತನಕ ಹಿಜಾಬ್ ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂದು ತಿಳಿಸಿ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಲಾಯಿತು.