ಶಿರಸಿ: ಎಲ್ಲರಲ್ಲೂ ಪ್ರತಿಭೆಯಿರುತ್ತೆ ಆದರೆ ದೃಢತೆ ಇರುವುದಿಲ್ಲ. ಮಹಿಳೆಯರು ಮನಸ್ಸನ್ನು ಶುದ್ಧವಾಗಿ, ಸ್ಥಿರವಾಗಿರಿಸಿಕೊಳ್ಳಬೇಕು. ಇಂದು ಮಹಿಳೆಯರಲ್ಲಿ ದೃಢತೆಯ ಕೊರತೆ ಕಾಣಿಸುತ್ತಿದೆ. ತಮಗೆ ಏನು ಬೇಕು ಎಂಬ ಬಗ್ಗೆ ಮೊದಲು ದೃಢವಾದ ನಿಲುವು ಹೊಂದಿರಬೇಕು ಎಂದು ಬ್ರಹ್ಮಕುಮಾರಿ ವೀಣಾಜಿಯರು ಗೋಪನಮರಿ ಸಭಾಭವನದಲ್ಲಿ ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು.
ಎಲ್ಲರ ಕಾಳಜಿ ಮಾಡುವ ಮಹಿಳೆ ತನ್ನ ಆರೋಗ್ಯದ ಕಡೆ ಲಕ್ಷ್ಯ ಕೊಡದೇ ವೈದ್ಯರ ಬಳಿ ಹೋಗುವುದನ್ನೂ ಮುಂದೂಡುವುದು ಸರಿಯಲ್ಲ. ಸುಖದುಃಖವನ್ನು ಹಂಚಿಕೊಂಡು ಸಣ್ಣ ಸಣ್ಣ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಒಳ್ಳೆಯ ಗೆಳೆತನ ಮಾಡಬೇಕು. ಕ್ಷುಲ್ಲಕ ಕಾರಣಗಳಿಂದ ಮನಸ್ಸನ್ನು ತುಂಬಿಸಿದರೆ ಅದು ಕೆಸರಿನ ಕೊಳವಾಗುತ್ತದೆ. ನಕಾರಾತ್ಮಕ ವಿಷಯಗಳು ಬಹು ಬೇಗನೇ ಬರುತ್ತದೆ. ಪ್ರಯತ್ನ ಪೂರ್ವಕವಾಗಿ ಸಕಾರಾತ್ಮಕ ವಿಷಯಗಳಿಗೆ ಮನವನ್ನು ತೆರೆದಿಡಬೇಕು. ಇಂದು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತ ಅವುಗಳನ್ನು ಹೇಗೆ ತಡೆಗಟ್ಟಬೇಕು ಮತ್ತು ಸುಲಭ ಪರಿಹಾರವನ್ನು ಕಂಡುಕೊಳ್ಳಬೇಕೆಂದು ತಿಳಿ ಹೇಳಿದರು.
ಲಯನ್ಸ್ ಕ್ಲಬ್ ಶಿರಸಿ ಮತ್ತು ಡಾ. ಎ.ಎನ್.ಪಟವರ್ಧನ್ ಫೌಂಡೇಶನ್ನಿನ ಮೂಲಕ ಏರ್ಪಟ್ಟ ಉಪನ್ಯಾಸ ಮತ್ತು ಸಂವಾದದಲ್ಲಿ ಲಿಲಿತಾಂಬಾ ಸ್ವಸಹಾಯ ಸಂಘ, ಅರೇಕಟ್ಟ ಮತ್ತು ಶ್ರೀಮಾತಾ ಸ್ವಸಹಾಯ ಸಂಘ, ಗೋಪನಮರಿ ಸದಸ್ಯರು ಭಾಗವಹಿಸಿದ್ದರು.
ಶ್ರೀಮಾತಾ ಸ್ವ.ಸ.ಸಂಘದ ಮಾತೆಯರಿಂದ ನಡೆದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸುವರ್ಣಾ ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ಎಮ್.ಜೆ.ಎಫ್. ಲಯನ್ ರಮಾ ಪಟವರ್ಧನ್ ಫೌಂಡೇಶನ್ನಿನ ಬಗ್ಗೆ ಮತ್ತು ಅಧ್ಯಕ್ಷತೆ ವಹಿಸಿದ್ದ ಎಮ್.ಜೆ.ಎಫ್ ಲಯನ್ ಶೀತಲ್ ಸ್ವಾದಿಯವರು ಲಯನ್ಸ್ ಕ್ಲಬ್ಬಿನ ಬಗ್ಗೆ ಮಾತನಾಡಿದರು.
ಲಕ್ಷ್ಮೀ ಹೆಗಡೆ ಮತ್ತು ಸುನಂದಾ ಹೆಗಡೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮ ನಿರ್ವಹಣೆಯನ್ನು ಗೀತಾ ಭಟ್ ಮತ್ತು ವಂದನಾರ್ಪಣೆಯನ್ನು ಲಯನ್ ಸುಮಂಗಲಾ ಹೆಗಡೆಯವರು ನಡೆಸಿಕೊಟ್ಟರು. ಕೋಶಾಧಿಕಾರಿ ಲಯನ್ ಅನಿತಾ ಹೆಗಡೆ ಮತ್ತು ಲಯನ್ ಶರಾವತಿ ಭಟ್ಟರು ಉಪಸ್ಥಿತರಿದ್ದರು.