
ಯಲ್ಲಾಪುರ: ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಮುಖ್ಯಮಂತ್ರಿ ಸ್ಥಾನ ಈಗ ಖಾಲಿ ಇಲ್ಲ. ಯಡಿಯೂರಪ್ಪನವರೇ ಆ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಈ ಕುರಿತಾಗಿ ಬಿಜೆಪಿ ಪಕ್ಷದ ರಾಜ್ಯ ಹೈಕಮಾಂಡ್, ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ಹೈಕಮಾಂಡ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಕೂಡ ಇದನ್ನು ಹತ್ತಾರು ಬಾರಿ ಸ್ಪಷ್ಟಪಡಿಸಿದ್ದಾರೆ. ನಾವು ಸಚಿವರುಗಳು ಅನೇಕರು ಕೂಡ ಈ ಮಾತನ್ನು ದೃಢಪಡಿಸಿದ್ದೇವೆ ಎಂದರು.
ಇನ್ನು ಎರಡು ವರ್ಷ ಈ ಅವಧಿ ಮುಗಿಯುವವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಬಹಳ ಕಷ್ಟದ ಕಾಲದಲ್ಲಿ ಹಾಗು ಸಂಕೀರ್ಣ ಪರಿಸ್ಥಿತಿಯಲ್ಲಿಯೂ ಕೂಡ ಯಡಿಯೂರಪ್ಪನವರು ಸಮರ್ಥವಾಗಿ ಕಾರ್ಯ ನಿಭಾಯಿಸಿದ್ದಾರೆ. ಆದುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಬದಲಾವಣೆಗಳಿಲ್ಲ ಎಂದು ಹೆಬ್ಬಾರ್ ಸಿ ಎಮ್ ಬೆನ್ನಿಗೆ ನಿಂತಿದ್ದಾರೆ.