ಶಿರಸಿ : ನಗರಕ್ಕೆ ನೀರು ಪೂರೈಕೆಗಾಗಿ ಪೈಪ್ ಲೈನ್ ಹಾಕುವವರು ಅಗೆದ ಪರಿಣಾಮ ಎಫ್.ಟಿ.ಟಿ.ಎಚ್ ಸರ್ವೀಸ್‌ನಲ್ಲಿ ಭಾರೀ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಇಂಟರ್‌ನೆಟ್ ಬಳಕೆದಾರರು ತಾಲೂಕಿನ ಬಾಳೆಗದ್ದೆ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಹುಲೇಕಲ್ ರಸ್ತೆಯ ಬಾಳೆಗದ್ದೆ ಬಳಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಬಿಎಸ್‌ಎನ್‌ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಕಡೆಯಲ್ಲಿ ನೂರಾರು ವಾಹನ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕೆಲ ವಾಹನ ಸವಾರರು ಹಾಗೂ ಪ್ರತಿಭಟನಾ ನಿರತ ಜನರ ನಡುವೆ ವಾಗ್ವಾದವೂ ನಡೆಯಿತು.
ನಗರಸಭೆ ಕೆಂಗ್ರೆ ಹೊಳೆಯಿಂದ ನೀರು ಪೂರೈಕೆಗಾಗಿ ಪೈಪ್ ಲೈನ್ ಅಳವಡಿಸುತ್ತಿದ್ದು, ಇದಕ್ಕಾಗಿ ರಸ್ತೆಬದಿಯಲ್ಲಿ ಎಫ್‌ಟಿಟಿಎಚ್ ಕೇಬಲ್ ಬಂದ ಕಡೆ ಅಗೆದು ಕೇಬಲ್ ಕಟ್ ಮಾಡಿದೆ. ಈ ಪರಿಣಾಮ ಎಫ್‌ಟಿಟಿಎಚ್ ಸರ್ವೀಸ್ ನಲ್ಲಿ ಭಾರೀ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯಿತು.
ಸಾಲ್ಕಣಿ, ವಾನಳ್ಳಿ, ಜಡ್ಡಿಗದ್ದೆ ಭಾಗದಲ್ಲಿ ವರ್ಕ್ ಪ್ರಾಮ್ ಹೋಮ್ ಮಾಡುವ ಜನರಿದ್ದು, ಇದರಿಂದ ತೀರಾ ತೊಂದರೆ ಉಂಟಾಗಿದೆ. ಈ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಸ್ಪಂದಿಸದೇ ನಿರ್ಲಕ್ಷ್ಯ ಮಾಡಿದ್ದಾರೆ. ಇಂಟರ್ ನೆಟ್ ಸೇವೆಯನ್ನು ಸಮರ್ಪಕವಾಗಿ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.