ಯಲ್ಲಾಪುರ: ದೇವಸ್ಥಾನಗಳನ್ನು ನಿರ್ಮಿಸಿದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಅಲ್ಲಿ ನಿರಂತರವಾಗಿ ಪೂಜೆ, ಧಾರ್ಮಿಕ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮದು ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ಬಾಳೆಹದ್ದ ಸಮೀಪದ ಕಾನಗೋಡಿನಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೋವಿಡ್ ನಂತಹ ಮಹಾಮಾರಿಗಳು ಹೆಚ್ಚಿನ ದುಷ್ಪರಿಣಾಮ ಬೀರದೇ ಇರಲು ದೈವೀಶಕ್ತಿ ಕಾರಣವಾಗಿದೆ. ದೇವತಾರಾಧನೆ, ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಮ್ಮನ್ನು ರಕ್ಷಿಸುತ್ತವೆ ಎಂದು ಹೇಳಿದರು.
ರಾಮಲಿಂಗೇಶ್ವರ ದೇವರ ಪ್ರತಿಷ್ಠಾ ಕಾರ್ಯವನ್ನು ಶ್ರೀಗಳು ನೆರವೇರಿಸಿದರು. ಪ್ರತಿಷ್ಠೆಯ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.