ಅಂಕೋಲಾ: ಒಂದೇ ಸ್ಥಳದಲ್ಲಿ ಒಟ್ಟಿಗೆ ನಾಲ್ಕು ಭಾರೀ ಗಾತ್ರದ ಹೆಬ್ಬಾವುಗಳು ಕಂಡುಬಂದ ಆಶ್ಚರ್ಯಕರ ಘಟನೆ ತಾಲೂಕಿನ ಸಿಂಗನಮಕ್ಕಿಯಲ್ಲಿ ನಡೆದಿದೆ. ಸಿಂಗನಮಕ್ಕಿಯಲ್ಲಿ ಅರಣ್ಯ ಇಲಾಖೆಯ ನೆಡುತೋಪಿನಲ್ಲಿ ಕಾಣಿಸಿಕೊಂಡ ನಾಲ್ಕು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಉರಗ ರಕ್ಷಕ ಮಹೇಶ ನಾಯ್ಕ ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಸಿಂಗನಮಕ್ಕಿಯ ಗೇರು ತೋಪಿನಲ್ಲಿ ಹಣ್ಣು ಕೀಳುತ್ತಿರುವ ಸಂದರ್ಭದಲ್ಲಿ ಎರಡು ಹೆಬ್ಬಾವುಗಳು ಕಂಡು ಬಂದವು ಕೂಡಲೇ ಉರಗ ರಕ್ಷಕ ಮಹೇಶ ನಾಯ್ಕ ಅವರನ್ನು ಕರೆ ಮಾಡಲಾಗಿತ್ತು, ಸ್ಥಳಕ್ಕೆ ಭೇಟಿ ನೀಡಿದ ಮಹೇಶ ನಾಯ್ಕ ಅವರು ಹೆಬ್ಬಾವು ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ಸಮೀಪದಲ್ಲೇ ಇನ್ನೆರಡು ಹೆಬ್ಬಾವುಗಳು ಕಂಡು ಬಂದು ಗ್ರಾಮಸ್ಥರು ಸೇರಿದಂತೆ ಎಲ್ಲರ ಕುತೂಹಲಕ್ಕೆ ಕಾರಣವಾಯಿತು.
ಇದೇ ಮೊದಲ ಬಾರಿ ಒಂದೇ ಸ್ಥಳದಲ್ಲಿ 4 ಹೆಬ್ಬಾವುಗಳನ್ನು ಕಂಡು ಅಚ್ಚರಿಗೊಂಡ ಮಹೇಶ ನಾಯ್ಕ ಅವರು ಹೆಬ್ಬಾವುಗಳನ್ನು ರಕ್ಷಿಸಿ ಈ ಕುರಿತಂತೆ ಮಂಗಳೂರಿನ ಉರಗ ತಜ್ಞ ಗುರುರಾಜ ಹೊಸಮನಿ ಅವರಿಗೆ ಮಾಹಿತಿ ನೀಡಿದಾಗ ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಹಾವುಗಳ ಮಿಲನ ಸಮಯ ಆಗಿರುವುದರಿಂದ ಒಂದೇ ಸ್ಥಳದಲ್ಲಿ 5 ರಿಂದ 6 ಹಾವುಗಳು ಕಂಡು ಬರುವುದು ಸಾಮಾನ್ಯ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಬಾಳೇಗುಳಿ ಹರ್ಷದ್ ಎನ್ನುವವರ ಮನೆಯಲ್ಲಿ ಕಂಡು ಬಂದ ನಾಗರಹಾವನ್ನು ಹಾಗೂ ಅರ್ಗಾದ ಮನೆಯೊಂದರಲ್ಲಿ ಇದ್ದ ನಾಗರಹಾವನ್ನು ಉರಗಪ್ರೇಮಿ ಮಹೇಶ ನಾಯ್ಕ ಅವರು ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.