ಭಟ್ಕಳ: ಕೋವಿಡ್ ಮಾರ್ಗಸೂಚಿಯ ಪಾಲನೆಯ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಇಲ್ಲಿನ ಸಾರದಹೊಳೆಯ ಶ್ರೀ ಹಳೆಕೋಟೆ ಹನುಮಂತ ದೇವಸ್ತಾನದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಎಪ್ರಿಲ್ 13 ರಿಂದ 19 ರ ವರೆಗೆ ವಿದ್ಯುಕ್ತವಾಗಿ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ರಾಯ ನಾಯ್ಕ ಹೇಳಿದರು.
ಅವರು ಈ ಕುರಿತು ರವಿವಾರ ಸಂಜೆ ದೇವಸ್ಥಾನದ ಸಭಾಭವನದಲ್ಲಿ ವಿವರ ನೀಡಿ ಈ ಹಿಂದೆ ನೂತನ ಶಿಲಾಮಯ ದೇವಸ್ತಾನದ ಉದ್ಘಾಟನಾ ಕಾರ್ಯಕ್ರಮವನ್ನು ಫೆ.8 ರಿಂದ 14 ರವರೆಗೆ ನಡೆಸಲು ತೀರ್ಮಾನಿಸಿ ಸಿದ್ದತೆಯನ್ನು ಮಾಡಲಾಗಿತ್ತು. ಆದರೆ ಸರಕಾರದ ಕೋವಿಡ್ ಮಾರ್ಗಸೂಚಿಯ ಕಾರಣ ಕಾರ್ಯಕ್ರಮವನ್ನು ಮುಂದೂಡಲು ಅನಿವಾರ್ಯವಾಯಿತು. ಈಗ ಮಂತ್ರಿಗಳ ನಿರ್ದೇಶನದ ಪ್ರಕಾರ ಕೆಲವು ದಿನಾಂಕಗಳನ್ನು ಪಡೆಯಲಾಗಿತ್ತು. ಅಂತಿಮವಾಗಿ ದೇವರ ಹಾಗೂ ನಮ್ಮ ಕುಲಗುರುಗಳ ಆಶೀರ್ವಾದದಂತೆ ಎಪ್ರಿಲ್ 15 ರಂದು ಮಿಥುನ ಲಗ್ನ ಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠಾಪನ ಕಾರ್ಯಗಳನ್ನು ಮಾಡಲು ತೀರ್ಮಾನಿಸಲಾಯಿತು.
ಉಳಿದಂತೆ ಶ್ರೀ ದೇವರ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು, ಸಾಂಸ್ಕ್ರತಿಕ ಕಾರ್ಯಕ್ರಮಗಳ ಬಗ್ಗೆ ನಿರ್ಧರಿಸಬೇಕಾಗಿದ್ದು ಮುದಿನ 1 ತಿಂಗಳ ಒಳಗೆ ಎಲ್ಲಾ ಕಾರ್ಯಕ್ರಮಗಳ ಪಟ್ಟಿಯನ್ನು ಸಾರ್ವಜನಿಕರಿಗೆ ಪೂರ್ಣ ಮಾಹಿತಿಯೊಂದಿಗೆ ನೀಡುತ್ತೇವೆ ಎಂದರು.
ಎಪ್ರಿಲ್ ತಿಂಗಳಲ್ಲಿ ಮದುವೆಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಸಮಾಜ ಭಾಂಧವರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹೊಂದಾಣಿಕೆ ಮಾಡಿಕೊಂಡು ಈ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಸುಬ್ರಾಯ ನಾಯ್ಕ,ತೆರ್ನಮಕ್ಕಿ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಪ್ರಮುಖರಾದ ಜೆ.ಜೆ. ನಾಯ್ಕ, ವೆಂಕಟೇಶ ನಾಯ್ಕ,ಶಿರಾಲಿ, ಗೌರೀಶ ನಾಯ್ಕ, ಮಂಜುನಾಥ ನಾಯ್ಕ, ಮತ್ತಿತರರು ಇದ್ದರು.