ಶಿರಸಿ: ಇತ್ತೀಚಿಗೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯ ಪತಿಯು ವ್ಯಾಕ್ಸಿನ್ ಕ್ಯಾರಿಯರ್ ತರುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದ್ದು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಈ ದುರ್ಘಟನೆಗೆ ಕಾರಣರಾದವರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು, ಈ ಪ್ರಕರಣದಲ್ಲಿ ನೊಂದ ಆಶಾ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ತಾಲ್ಲೂಕಾ ಆ.ಕು.ಕ ಅಧಿಕಾರಿ ಡಾ.ವಿನಾಯಕ ಭಟ್ಟ’ಗೆ ಮನವಿ ಸಲ್ಲಿಸಿದರು.
‘ಆಶಾಗಳಿಗೆ ತಮ್ಮದಲ್ಲದ ಕೆಲಸಗಳನ್ನು ಹೇರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂಬ ಭರವಸೆಯ ಮಾತುಗಳು ಕಾರ್ಯರೂಪಕ್ಕೆ ಬರದೆ ಇಂತಹ ಅನಾಹುತವೂ ಜರುಗಿಹೋಗಿದೆ. ರಾಜ್ಯ ಮಟ್ಟದಲ್ಲಿ ಈ ಬಗ್ಗೆ ಆಧೇಶಗಳು ಬಂದಿದ್ದರೂ ತಳಮಟ್ಟದ ಕಾರ್ಯಕ್ಷೇತ್ರಗಳಲ್ಲಿ ಈವರೆಗೂ ಈ ಆದೇಶಗಳು ಜಾರಿಯಾಗದೇ ಇನ್ನೂ ನೆನೆಗುದಿಗೆ ಬಿದ್ದಿವೆ. ಆ ಭರವಸೆಗಳೆಲ್ಲವೂ ಕೇವಲ ಮಾತುಗಳಷ್ಟೇ ಆಗಿವೆ ಎಂದು ಈ ಘಟನೆ ಸಾಬೀತು ಮಾಡಿದೆ. ಇದೇ ಸಂದರ್ಭದಲ್ಲಿ ಇಂತಹ ದುರ್ಘಟನೆಗಳು ಇನ್ನು ಮುಂದೆ ಎಲ್ಲೂ ಜರುಗದಂತೆ ಮರುಕಳಿಸದಂತೆ ಎಲ್ಲಾ ಜಿಲ್ಲೆಯಲ್ಲೂ ಸಹ ಸೂಕ್ತ ನಿಗಾ ವಹಿಸಬೇಕೆಂದು ಆಗ್ರಹಿಸುತ್ತಾ, ಆಶಾ ಕಾರ್ಯಕರ್ತೆಯರಿಗೆ ತಮ್ಮದಲ್ಲದ ಮತ್ತು ಯಾವುದೇ ಇಲಾಖೆಯೇತರ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ವಹಿಸಬಾರದೆಂದು ಹಿಂದೆ ಅನೇಕ ಬಾರಿ ಸಂಘವು ಕೇಳುತ್ತಾ ಬಂದಿರುವುದನ್ನು ಸಂಘವು ಪುನಃ ಮತ್ತೆ ಮತ್ತೆ ಆಗ್ರಹಿಸಬಯಸುತ್ತದೆ. ಆಶಾ ಕಾರ್ಯಕರ್ತೆಯರಿಗೆ ಕೆಲಸಕ್ಕೆ ತಕ್ಕಂತೆ ಪ್ರೋತ್ಸಾಹ ಧನ ರೂ 12,000/- ನಿಗದಿಪಡಿಸಬೇಕು.
ಹೆರಿಗೆ ಮೊದಲು ಮತ್ತು ನಂತರದಿಂದ ಹಿಡಿದು ತಾಯಿ-ಮಗುವಿನ ಆರೈಕೆಗಾಗಿ ಹಗಲು-ರಾತ್ರಿ ದುಡಿಯುವ ಒಬ್ಬ ಆಶಾಳ ಪ್ರೋತ್ಸಾಹಧನವನ್ನೂ ನ್ಯಾಯಯುತವಾಗಿ ಕೊಡದ ಆರೋಗ್ಯ ಇಲಾಖೆ, ಆಶಾ ತನ್ನ ಗಂಡ, ಅಣ್ಣ-ತಮ್ಮ ಇತ್ಯಾದಿ ಕುಟುಂಬದ ಸದಸ್ಯರನ್ನೆಲ್ಲ ದುಡಿಸಿಕೊಂಡು, ಉಳುವಯ್ಯನನ್ನು ಆಶಾ ಚೈತ್ರಾಳಿಂದ ಕಿತ್ತುಕೊಂಡಿದೆ. ಅನ್ಯಾಯದ ಸಾವು, ಭವಿಷ್ಯವನ್ನೇ ಕತ್ತಲು ಮಾಡಿದ ಇಬ್ಬರು ಮಕ್ಕಳಿಗೆ ಆಶಾ ಚೈತ್ರಾಳಿಗೆ ಬೆಳಕಿನ ಭರವಸೆ ನೀಡಬೇಕಾಗಿದೆ.
ತಮ್ಮದಲ್ಲದ ಕೆಲಸ ಮಾಡಿಸಬಾರದೆಂಬ ಇರುವ ಆದೇಶವನ್ನೇ ಕಟ್ಟುನಿಟ್ಟಾಗಿ ಜಾರಿಗೆ ತರದ ಆರೋಗ್ಯ ಇಲಾಖೆಯೇ ಈ ಸಾವಿಗೆ ಹೊಣೆ ಆದ್ದರಿಂದ ಇಲಾಖೆಯು ಈ ದುರ್ಘಟನೆಯಿಂದ ಈಗಲಾದರೂ ಎಚ್ಚೆತ್ತುಕೊಂಡು ಇನ್ನು ಮುಂದೆ ಆಶಾ ಕಾರ್ಯಕರ್ತೆಯರಿಗೆ ಅವರದಲ್ಲದ ಇತರ ಕೆಲಸ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ನೀಡದಂತೆ ಇಡೀ ಇಲಾಖೆಯಲ್ಲಿ ಮೇಲಿನಿಂದ ಕೆಳಗಡೆವರೆಗೆ ಚಾಚುತಪ್ಪದೇ ಪಾಲಿಸುವುದನ್ನು ಖಾತ್ರಿಪಡಿಸಬೇಕು.
ನಿಷ್ಪಕ್ಷಪಾತ ತನಿಖೆ ನಡೆಸಿ, ವ್ಯಾಕ್ಸೀನ್ ಕ್ಯಾರಿಯರ್ ತರಲು ಒತ್ತಡ ಹೇರಿ ಈ ಘಟನೆಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ. ಘಟನೆಯ ವಿಡಿಯೋದಲ್ಲಿ ವ್ಯಾಕ್ಸೀನ್ ಕ್ಯಾರಿಯರ್ ಕೂಡ ಅಪಘಾತದ ಸ್ಥಳದಲ್ಲಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ನಂತರ ಕೂಡಲೇ ತಾಲ್ಲೂಕು ವೈದ್ಯಾಧಿಕಾರಿಗಳು ಆಡಿಯೋ ಸಂದೇಶವನ್ನು ಈ ಬಗ್ಗೆ ಕಳುಸಿರುವುದು ಇದೆ. ಆಶಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಆಶಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಹಾಗೂ ಈ ಕೆಳಗಿನ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಸರ್ಕಾರವನ್ನು ಆಗ್ರಹಿಸುತ್ತೇವೆ.
ಹಕ್ಕೊತ್ತಾಯಗಳು :
1) ವ್ಯಾಕ್ಸೀನ್ ಕ್ಯಾರಿಯರ್ ತಲುಪಿಸುವ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡ ಆಶಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ.
2) ನಿಷ್ಪಕ್ಷಪಾತ ತನಿಖೆ ನಡೆಸಿ, ವ್ಯಾಕ್ಸೀನ್ ಕ್ಯಾರಿಯರ್ ತರಲು ಒತ್ತಡ ಹೇರಿ ಈ ಘಟನೆಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಿ.
3) ತಮ್ಮದಲ್ಲದ ಕೆಲಸಗಳನ್ನು ಮಾಡಲು ಆಶಾ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುವುದರ ಬಗ್ಗೆ, ಅವರ ಸುರಕ್ಷತೆಯ ಬಗ್ಗೆ ಇರುವ ಆಧೇಶಗಳನ್ನು ತುರ್ತಾಗಿ-ಕಟ್ಟುನಿಟ್ಟಾಗಿ ಜಾರಿಗೆ ತನ್ನಿ,
4) ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕೃತ ಜ್ಞಾಪನಾ ಪತ್ರ/ ನಡಾವಳಿಗಳನ್ನು ಜಿಲ್ಲೆಯ ಪ್ರತೀ ಪಿಎಚ್‍ಸಿ ಗಳಲ್ಲಿ ಜಾರಿಗೆ ಬರುವಂತೆ ತಕ್ಷಣ ಕ್ರಮವಹಿಸಿ.
ಈ ಸಂದರ್ಭದಲ್ಲಿಅಧ್ಯಕ್ಷೆ ಲಕ್ಷ್ಮೀ ವಿ. ನಾಯ್ಕ , ಕಾರ್ಯದರ್ಶಿ ಅರ್ಚನಾ ನಾಯ್ಕ , ನೇತ್ರಾವತಿ ಗೌಡ ಹೆಗಡೆಕಟಾ,್ಟ, ಸವಿತಾ ಭಟ್ಟ ಕಕ್ಕಳ್ಳಿ, ಸೀತಾ ನಾಯ್ಕ ಸಾಲ್ಕಣಿ, ಅನ್ನಪೂರ್ಣ ಬಿಸ್ಲಕೊಪ್ಪ, ಜಾನಕಿ ನಿಲೇಕಣಿ ಯು.ಪಿ.ಎಚ್.ಸಿ, ಗೀತಾ ಕಬ್ಬೇರ ಬನವಾಸಿ, ಸುಧಾ ಸುಗಾವಿ, ಚಾಂದಬಿ ಹುಲೇಕಲ್, ಮಹಾಲಕ್ಷ್ಮೀ ದಾಸನಕೊಪ್ಪ, ಮಾಲತಿ ಕಬ್ಬೇರ ಸುಗಾವಿ, ಕ್ಲಾರಾ ಎಲ್ ಲೂಪಿಸ್, ಸುಷ್ಮಾ ಬಿಸ್ಲಕೊಪ್ಪ, ಪಾರ್ವತಿ ನಾಯ್ಕ ಬಿಸ್ಲಕೊಪ್ಪ ಹಾಜರಿದ್ದರು.