ಸಿದ್ದಾಪುರ: ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡಲು ಹೋರಾಟಗಾರರ ವೇದಿಕೆಯು ಬದ್ಧವಾಗಿದೆ. ಭೂಮಿ ಹಕ್ಕು ಕೊಡಲು ಸರಕಾರ ವಿಫಲವಾದರೂ, ಕಾನೂನಾತ್ಮಕ ಹೋರಾಟದೊಂದಿಗೆ ಭೂಮಿಯ ಹಕ್ಕು ಕೋಡಲು ಪ್ರಯತ್ನಿಸಲಾಗುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ತಾಲೂಕಿನ ಕಾನಸೂರಿನ ಗಜಾನನೋತ್ಸವ ಸಮಿತಿಯ ಸಬಾಂಗಣದಲ್ಲಿ ಜರುಗಿದ ಫೇ 17 ರ ಕಾರ್ಯಕ್ರಮದ ಕೊನೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅರಣ್ಯ ಅತೀಕ್ರಮಣದಾರರಿಗೆ ಮೂಲಭೂತ ಸೌಲಭ್ಯ ಸರಕಾರ ನೀಡಿದರೇ ಸಾಕಾಗದು. ಭೂಮಿ ಹಕ್ಕು ಕೊಡುವ ದಿಸೆಯಲ್ಲಿ ಚಿಂತಿಸಬೇಕಾಗಿದೆ. ಸರಕಾರ ಅರಣ್ಯವಾಸಿಗಳ ಪರವಾದ ನಿಲುವನ್ನು ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಅತೀಕ್ರಮಣದಾರರು ನಿರಾಶ್ರಿತರಾಗುವುದರಲ್ಲಿ ಸಂಶಯವಿಲ್ಲ. ಈ ದಿಸೆಯಲ್ಲಿ ಸರಕಾರ ಇಚ್ಛಾಶಕ್ತಿ ಪ್ರಕಟಿಸಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ನ್ಯಾಯವಾದಿ ಉದಯ ನಾಯ್ಕ, ದೇವಿದಾಸ ನಾಯ್ಕ, ಸೀತಾರಾಮ ಗೌಡ ನೀರಗಾನ್, ಜಾನು ಗೌಡ ಗಮನಗುಡ್ಡಿ ಮುಂತಾದವರು ಉಪಸ್ಥಿತರಿದ್ದರು. ಉಮೇಶ ನಾಯ್ಕ ಶೇಲೂರು ಕಾರ್ಯಕ್ರಮ ನಿರ್ವಹಿಸಿದರು. ಸತೀಶ ನಾಯ್ಕ ಶೆಲೂರು ಸ್ವಾಗತಿಸಿ, ವಂದಿಸಿದರು.