ಮುಂಡಗೋಡ: ಪಟ್ಟಣದ ಕಟ್ಟಿಮನಿ ಲೇಔಟ್ ಪಕ್ಕದಲ್ಲಿ ನಿರ್ಮಿಸಿದ ಕಸ ಸಂಗ್ರಹಣಾ ಘಟಕದ ಸಮರ್ಪಕ ನಿರ್ವಹಣೆಯಿಲ್ಲದ ಪರಿಣಾಮ ಸುತ್ತಲೂ ಗಿಡಗಂಟಿಗಳು ಬೆಳೆದು ಪಾಳು ಕೊಂಪೆಯಂತಾಗಿದೆ.
ಪಟ್ಟಣ ಪಂಚಾಯತಕ್ಕೆ ಮೀಸಲಿಟ್ಟ ಜಾಗದಲ್ಲಿ ಈ ಕಸ ಸಂಗ್ರಹನಾ ಘಟಕ ನಿರ್ಮಾಣ ಮಾಡಿ ಕಳೆದ ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಸಮರ್ಪಕ ನಿರ್ವಹಣೆಯಿಲ್ಲದ ಕಾರಣ ಅದರ ಸುತ್ತುಮುತ್ತಲೂ ಗಿಡಗಂಟಿಗಳು ಬೆಳೆದು ದಟ್ಟ ಅರಣ್ಯದಂತೆ ಗೋಚರಿಸಲಾರಂಭಿಸಿದೆ.
ಅಲ್ಲದೇ, ಈ ಘಟಕದ ಸುತ್ತತೂ ನೀರು ನಿಂತು ಕೆರೆಯಂತಾಗಿದೆ. ಇದಕ್ಕೆ ಪಟ್ಟಣ ಪಂಚಾಯತಿಯ ದಿವ್ಯ ನಿರ್ಲಕ್ಷವೇ ಕಾರಣ ಎಂದು ಇಲ್ಲಿನ ನಿವಾಸಿಗಳು ದೂರುತ್ತಿದ್ದಾರೆ.
ಉತ್ತಮ ಬಡಾವಣೆಗಳಲ್ಲಿ ಪದೇಪದೆ ಅನುದಾನಗಳನ್ನು ಹಾಕಿ ಸಿಡಿ ನಿರ್ಮಾಣ, ರಸ್ತೆ ದುರಸ್ತಿ, ಸಿಡಿ ಮರುನಿರ್ಮಾಣ ಎಂದು ಅವೈಜ್ಞಾನಿಕ ಕಾಮಗಾರಿ ಮಾಡುವ ಬದಲು ಬಡಾವಣೆಗಳಿಗೆ ಕನಿಷ್ಟ ಮೂಲ ಸೌಕರ್ಯಗಳನ್ನು ಒದಗಿಸಲು ಹಿಂದೇಟು ಹಾಕುತ್ತಿರುವುದು ನಾಗರಿಕ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.