ಕಾರವಾರ: ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಸೋಮವಾರ ಭೇಟಿ ನೀಡಿ, ಶಾಲೆಯಲ್ಲಿರುವ ಮೂಲಭೂತ ಸೌಕರ್ಯ, ಮಕ್ಕಳ ಕಲಿಕಾ ಚಟುವಟಿಕೆ, ಬಿಸಿಯೂಟದ ವ್ಯವಸ್ಥೆ ಪರಿಶೀಲಿಸಿದರು.
ಶಾಲೆ ಆವರಣದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕಾಂಪೌಂಡ್ ಕಾಮಗಾರಿ ವೀಕ್ಷಿಸಿದ ಅವರು, ಶಾಲೆಗೆ ಸುತ್ತಲೂ ಸೂಕ್ತ ಕಾಂಪೌಂಡ್ ನಿರ್ಮಿಸುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಮುಖ್ಯ ಶಿಕ್ಷಕ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಅಲ್ಲದೇ, ಶಾಲಾ ಕೊಠಡಿಗಳಿಗೆ ಭೇಟಿ ನೀಡಿ ಶಿಕ್ಷಕರ ಬೋಧನೆ ಹಾಗೂ ಮಕ್ಕಳಿಗೆ ಸಿಗುತ್ತಿರುವ ಬೋಧನಾ ಸಾಮಗ್ರಿ ಮತ್ತು ಬಿಸಿಯೂಟದ ಆಹಾರ ಧಾನ್ಯಗಳನ್ನು ಖುದ್ದಾಗಿ ಪರಿಶೀಲಿಸಿ, ಇನ್ನಿತರ ಸೌಲಭ್ಯಗಳ ಕುರಿತು ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಪಿಡಿಒ ನಾಗೇಂದ್ರ ನಾಯ್ಕ, ಶಾಲಾ ಮುಖ್ಯ ಶಿಕ್ಷಕರು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.