ಕಾರವಾರ: ಮೂರು ದಿನಗಳ ಕಾಲ ನಡೆಯುವ ಇಲ್ಲಿನ ಕಾಳಿ ನದಿ ನಡುಗಡ್ಡೆಯಲ್ಲಿರುವ ಶ್ರೀ ಕಾಳಿಕಾ ದೇವಿಯ ಜಾತ್ರಾ ಮಹೋತ್ಸವವು ಸೋಮವಾರ ವಿಜೃಂಭಣೆಯಿಂದ ನಡೆಯಿತು. ನೂರಾರು ಭಕ್ತರು ದೋಣಿಗಳ ಮೂಲಕ ತೆರಳಿ, ಶ್ರೀ ಕಾಳಿಕಾ ಮಾತೆಯ ದರ್ಶನ ಪಡೆದು, ಪುನೀತರಾದರು.
ನಗರದ ಕೊಡಿಭಾಗದಿಂದ ಸುಮಾರು 2 ಕಿ.ಮೀ ದೂರದ ವಿಶಾಲ ದ್ವೀಪದಲ್ಲಿ ನೆಲೆಯಾಗಿರುವ ಕಾಳಿ ದೇವಿಯನ್ನು ಅನಾದಿಕಾಲದಿಂದಲೂ ಪೂಜಿಸಲಾಗುತ್ತಿದೆ. ಸುತ್ತಲೂ ಕಾಳಿ ನದಿ ತುಂಬಿ ಹರಿಯುತ್ತಿದ್ದರೂ ದ್ವೀಪ ಹಸಿರನ್ನು ತುಂಬಿಕೊಂಡು ವಿಶಾಲವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯು ಮೂರು ದಿನಗಳ ಕಾಲ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಾತ್ರೆಯ ಮೊದಲ ದಿನ ಹೋಮ, ಹವನ ಸೇರಿದಂತೆ ವಿಶೇಷ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಈ ಕಾಳಿಕಾ ದೇವಿಯ ಜಾತ್ರೆ ವಿಶಿಷ್ಟವಾಗಿದ್ದು, ಜಾತ್ರೆಗೆ ತೆರಳಬೇಕೆಂದರೆ ದೋಣಿ ಮೂಲಕವೇ ಸಾಗಬೇಕು. ಪ್ರವಾಸಿ ತಾಣವೂ ಆಗಿರುವ ಈ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡಿ, ದೇವಿಯ ಆರ್ಶಿವಾದ ಪಡೆಯುತ್ತಾರೆ.
ದೇವಿ ದರ್ಶನ ಪಡೆಯಲು ದೋಣಿ ಮೂಲಕ ಪಯಣ:
ಕಾಳಿ ನದಿಯ ನಡುಗಡ್ಡೆಯಲ್ಲಿ ದೇವಿ ಜಾತ್ರೆ ನಡೆಯುವುದರಿಂದ ಇಲ್ಲಿಗೆ ತೆರಳುವ ಪ್ರತಿಯೊಬ್ಬರೂ ದೋಣಿಯನ್ನೇ ಅವಲಂಬಿಸಬೇಕು. ಇಂತಹ ವಿಶಿಷ್ಟ ಅನುಭವ ಪಡೆಯುವುದಕ್ಕಾಗಿಯೇ ಸಾಕಷ್ಟು ಜನರು ಜಿಲ್ಲೆಯಿಂದ ಮಾತ್ರವಲ್ಲದೇ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಿಂದಲೂ ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆಯುತ್ತಾರೆ.
ಈ ಬಾರಿ ಕೊರೊನಾ ಕಾರಣದಿಂದ ಬೇರೆ ರಾಜ್ಯದಿಂದ ಹೆಚ್ಚಿನ ಜನರು ಆಗಮಿಸಿರಲಿಲ್ಲ. ಇಲ್ಲಿಗೆ ಆಗಮಿಸುವ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಕಾಳಿ ದೇವಿಗಿದೆ. ಈ ಮೂರು ದಿನಗಳ ಕಾಲ ಈ ದೇವಿಯ ದರ್ಶನ ಪಡೆಯಲು ನೂರಾರು ಭಕ್ತರು ದೋಣಿಗಳ ಮೂಲಕ ಆಗಮಿಸಿ, ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.