ಭಟ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಭಟ್ಕಳ ಘಟಕದ ವತಿಯಿಂದ ತಾಲೂಕಿನ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಕ್ರಿಕೇಟ್ ಕ್ರೀಡಾಕೂಟವನ್ನು ಆಯೋಜಿಸಲಾಯಿತು.
ಕ್ರೀಡಾಕೂಟದಲ್ಲಿ ಪೊಲೀಸ್, ಶಿಕ್ಷಣ, ಹೆಸ್ಕಾಂ ,ಕಂದಾಯ ,ಅಗ್ನಿಶಾಮಕ, ಅರಣ್ಯ,ಸಾರಿಗೆ ಇಲಾಖೆಯ ಮುಂತಾದ ನೌಕರರ ತಂಡ ಭಾಗವಹಿಸಿದ್ದವು.
ಕ್ರೀಡಾಕೂಟವನ್ನು ಡಿವೈಎಸ್ಪಿ ಬೆಳ್ಳಿಯಪ್ಪ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಭಟ್ಕಳ ತಾಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘ ಕ್ರಿಯಾಶೀಲವಾಗಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವುದು ನಾವೆಲ್ಲ ನೋಡಿದ್ದೇವೆ .ಇವರು ನೌಕರರ ಸಮಸ್ಯೆಗೆ ಸ್ಪಂದಿಸುವುದರ ಜೊತೆಗೆ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದಾರೆ .ಇಂತಹ ಕ್ರೀಡಾಕೂಟವನ್ನು ನಡೆಸುವುದರಿಂದ ನೌಕರರಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ತಿಳಿಸಿದರು.
ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ ಮಾತನಾಡಿ ಇಂದಿನ ದಿನದಲ್ಲಿ ನೌಕರರು ತೀರಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ನೌಕರರಿಗೆ ಮಾನಸಿಕ ನೆಮ್ಮದಿ ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ನೌಕರರಲ್ಲಿ ಸಂಘಟನೆ, ಒಗ್ಗಟ್ಟು, ಪರಿಚಯ ,ಸೌಹಾರ್ದಯುತ ಭಾವನೆ ಬೆಳೆಯುತ್ತದೆ ನಮ್ಮ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರ ನೇತೃತ್ವದಲ್ಲಿ ನಮ್ಮ ಸಂಘ ಅತ್ಯಂತ ಬಲಿಷ್ಠವಾಗಿದೆ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ತಮಗೆಲ್ಲ ತಿಳಿದಿದೆ .ನಮ್ಮ ಸಂಘ ನೌಕರರ ಸ್ನೇಹಿಯಾಗಿ, ನೌಕರರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನದಲ್ಲಿ ಸರ್ಕಾರಿ ನೌಕರರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲು ಯೋಜನೆಯನ್ನು ರೂಪಿಸಿದ್ದೇವೆ ಎಂದರು.
ಹೆಸ್ಕಾಂ ಇಲಾಖೆಯ ಶೇಖರ್ ಪೂಜಾರಿ, ಸಂಶುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಪರಿಷತ್ ಸದಸ್ಯ ಶ್ರೀಪ್ರಕಾಶ್ ಶಿರಾಲಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ವಾಸುದೇವ ಮೊಗೇರ ವಂದಿಸಿದರು.