ಕಾರವಾರ: ರಾಜ್ಯಾದ್ಯಂತ ಕೊರೋನಾ ಕೊಂಚ ಇಳಿಕೆ ಕಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆಯ ಹಲವು ಪ್ರವಾಸಿ ತಾಣ ಸೇರಿದಂತೆ ಪ್ರಮುಖ ಕಡಲ ತೀರಗಳತ್ತ ಮುಖ ಮಾಡುತ್ತಿದ್ದು, ಭಾನುವಾರ ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಪ್ರವಾಸಿಗರ ಸಮೂಹವೇ ನೆರೆದಿತ್ತು.
ಕೊರೋನಾದಿಂದ ಸಂಪೂರ್ಣ ನೆಲಕಚ್ಚಿದ್ದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸದ್ಯ ಮರು ಹುರುಪು ಬಂದಂತಾಗಿದ್ದು, ಜಿಲ್ಲೆಯತ್ತ ಪ್ರವಾಸಿಗರ ದಂಡು ಮುಖ ಮಾಡುತ್ತಿವೆ. ಅದರಲ್ಲೂ, ಕರಾವಳಿ ಭಾಗದ ಹಲವು ಕಡಲ ತೀರಕ್ಕೆ ಬೆಂಗಳೂರು, ಮೈಸೂರು, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ವಿವಿಧ ಹೊರ ರಾಜ್ಯಗಳ ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಇದರಿಂದ ಕಳೆದ ಮೂರು ವರ್ಷಗಳಿಂದ ನೆಲಕಚ್ಚಿದ್ದ ಪ್ರವಾಸೋದ್ಯಮಕ್ಕೆ ಮರು ಜೀವ ಬಂದಂತಾಗಿದೆ.
ಸ್ವಚ್ಛತೆಗೆ ಮಹತ್ವ ನೀಡಿ:
ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಕಡಲ ತೀರದಲ್ಲಿ ಸಂಬಂಧಪಟ್ಟ ಇಲಾಖೆಯು ಸಾಕಷ್ಟು ಫಲಕಗಳನ್ನು ಅಳವಡಿಸಿ, ಕಸದ ತೊಟ್ಟಿ ಕಲ್ಪಿಸಿದರೂ ಸಹ ಕೆಲವು ಪ್ರವಾಸಿಗರು ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತಿಂಡಿ-ತಿನಿಸುಗಳ ಪೊಟ್ಟಣಗಳನ್ನು ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಕಂಡ ಕಂಡಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಪ್ರಜ್ಞಾವಂತ ನಾಗರಿಕರು ಮುಜುಗರಕ್ಕೆ ಈಡಾಗುವಂತಾಗಿದ್ದು, ನಗರಸಭೆ ಈ ಬಗ್ಗೆ ಇನ್ನೂ ಹೆಚ್ಚಿನ ಗಮನಹರಿಸಬೇಕಿದೆ.
ಕೊರೋನಾ ಮುನ್ನೆಚ್ಚರಿಕೆ ಮರೆತ ಜನತೆ:
ಕೊರೊನಾ ರೂಪಾಂತರಿ ಬಗ್ಗೆ ಸರ್ಕಾರ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮವಹಿಸಿದೆ. ಅಲ್ಲದೇ, ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸಾನಿಟೈಸರ್ ಬಳಕೆಯ ಬಗ್ಗೆ ಪದೇ ಪದೆ ಎಚ್ಚರಿಕೆ ನೀಡುತ್ತಲೇ ಇದೆ. ಆದರೆ, ಪ್ರವಾಸಿಗರು ಮಾತ್ರ ಕೊರೊನಾ ಮುನ್ನೆಚ್ಚರಿಕೆಗಳನ್ನು ಮರೆತು, ಮೋಜು-ಮಸ್ತಿಯಲ್ಲಿ ತೊಡಗಿರುವುದು ಆಂತಕಾರಿ ಬೆಳವಣಿಗೆಯಾಗಿದೆ.
ಕಳೆದೆರಡು ವಾರಗಳಿಂದ ಹಲವು ಭಾಗಗಳ ಸಾವಿರಾರು ಸಂಖ್ಯೆಯ ಪ್ರವಾಸಿಗರು ಠಾಗೋರ್ ಕಡಲ ತೀರಕ್ಕೆ ಆಗಮಿಸುತ್ತಿದ್ದು, ಇದರಿಂದ ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ವ್ಯಾಪಾರ-ವಹಿವಾಟಿಗೂ ಅನುಕೂಲ ವಾತಾವರಣ ನಿರ್ಮಾಣವಾಗಿದೆ.
– ಸುರೆಂದರ್ ಚೌಹಾಣ (ಬೀದಿಬದಿ ವ್ಯಾಪಾರಿ)
ಠಾಗೋರ್ ಕಡಲ ತೀರಕ್ಕೆ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಆಗಮಿಸುತ್ತಾರೆ. ಆದರೂ ಪ್ರವಾಸಿಗರು ಕೊರೊನಾ ಮುನ್ನೆಚ್ಚರಿಕಾ ಕ್ರಮ ಅನುಸರಿಸದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ನಗರಸಭೆ ಹೆಚ್ಚಿನ ಗಮನಹರಿಸಬೇಕು.
– ಪ್ರವೀಣ ನಾಯಕ (ಸ್ಥಳೀಯ)
ನೀರಿನಲ್ಲಿ ನಿರ್ಲಕ್ಷ್ಯ ಬೇಡ:
ಇತ್ತೀಚೆಗೆ ಆಗಮಿಸುವ ಪ್ರವಾಸಿಗರು ನೀರಿನಲ್ಲಿ ಮೋಜು- ಮಸ್ತಿ, ಸ್ನಾನ ಮಾಡುವುದು ಸಾಮಾನ್ಯವಾಗುತ್ತಿದೆ. ನೀರಿನಲ್ಲಿ ಮೈಮರೆತ ಪರಿಣಾಮ ಈ ಹಿಂದೆ ಸಾಕಷ್ಟು ಅವಘಡಗಳೂ ಸಂಭವಿಸಿದ್ದು, ಪ್ರವಾಸಿಗರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗಿದೆ.