ಹೊನ್ನಾವರ : ತಾಲೂಕಿನ ಹಳದಿಪುರ ಮುಖ್ಯ ಪ್ರಾಣಾಂತರ್ಗತ ಲಕ್ಷ್ಮಿ ವೆಂಕಟೇಶ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಉತ್ಸವ ಮೂರ್ತಿಯ ಜಲಕ್ರೀಡೆ ಕರಿಮೂಲೆಯ ಬಡಗಣಿ ನದಿಯಲ್ಲಿ ನಡೆಯಿತು.
ಪ್ರತಿ ವರ್ಷದಂತೆ ರಥೋತ್ಸವದ ಮಾರನೇ ದಿನ ಪಲ್ಲಕ್ಕಿಯಲ್ಲಿ ಊರೂರಿಗೆ ತಿರುಗಿ ಭಕ್ತಾದಿಗಳಿಂದ ಪೂಜೆಯ ಸೇವೆ ಪಡೆಯುವುದು ನಡೆದು ಬಂದ ಸಂಪ್ರದಾಯವಾಗಿದ್ದು ಅಂತೆಯೇ ಸಾಯಂಕಾಲ ನದಿಯಲ್ಲಿ ದೋಣಿಯ ಮೂಲಕ ಜಲಕ್ರೀಡೆ ನಡೆಸಿ ಭಕ್ತರ ಸೇವೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ದೋಣಿಯಲ್ಲಿ ಜಲಕ್ರೀಡೆಯ ಸೇವೆಯನ್ನು ಇಲ್ಲಿನ ಸ್ಥಳೀಯರಾದ ಖಾರ್ವಿ ಸಮಾಜದ ದಾಮು ಖಾರ್ವಿ ಹಾಗೂ ಅವರ ಸಹೋದರರ ಕುಟುಂಬ ನಡೆಸಿಕೊಂಡು ಬರುತ್ತಿದ್ದು ದೋಣಿಯಲ್ಲಿ ದೇವರ ಮೂರ್ತಿಯನ್ನು ಇರಿಸಿ ನದಿಯಲ್ಲಿ ಐದು ಸುತ್ತುಗಳನ್ನು ಸಂಚರಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಜಲ ಕ್ರೀಡೆಯನ್ನು ಕಣ್ತುಂಬಿಕೊಂಡರು.