ಅಂಕೋಲಾ : ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾವಿರಾರು ಜನ ಅರ್ಜಿ ಸಲ್ಲಿಸಿರುತ್ತಾರೆ. ಇಂದು ನಿಜವಾಗಿಯೂ ಸ್ಪರ್ಧೆ ನಡೆಯುತ್ತಿರುವುದು ತರಬೇತಿ ಪಡೆದ ಸ್ಪರ್ಧಾಕಾಂಕ್ಷಿಗಳ ನಡುವೆ ಮಾತ್ರ ಎಂದು ಉಪನ್ಯಾಸಕ ಡಾ. ಹನುಮಂತ ಎಚ್ ಹೇಳಿದರು.
ಅವರು ಪಟ್ಟಣದ ಕಲ್ಪವೃಕ್ಷ ಸ್ಪರ್ಧಾತ್ಮಕ ತರಬೇತಿಗಳ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಕೇಂದ್ರ ಬಜೆಟ್ 2022-23ರ ವಿಶ್ಲೇಷಣೆ’ ಕುರಿತು ಉಚಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಆಸಕ್ತಿ ಹೆಚ್ಚಬೇಕಿದೆ. ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಬೆಳೆಯಬೇಕಿದೆ. ಉತ್ಕೃಷ್ಟ ತರಗತಿ ಮತ್ತು ಉತ್ತಮ ತರಬೇತಿ ಆತ್ಮವಿಶ್ವಾಸ ವೃದ್ಧಿಸಲು ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ಮಾರುತಿ ಹರಿಕಂತ್ರ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ತಪಸ್ಸಿನಂತೆ. ಸುತ್ತಮುತ್ತಲಿನ ವಿದ್ಯಮಾನಗಳ ಅರಿವಿನೊಂದಿಗೆ ನಿರಂತರ ಅಧ್ಯಯನ ಅಗತ್ಯ. ಪರೀಕ್ಷಾ ಸಿದ್ಧತೆಯ ಅವಧಿಯಲ್ಲಿ ಮಾನಸಿಕ ಜಡತ್ವ ಹೋಗಲಾಡಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ಆಯೋಜಿಸಲಾಗಿದೆ. ಸ್ಪರ್ಧಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹರ್ಷ ತಂದಿದೆ ಎಂದರು.
ಕಲ್ಪವೃಕ್ಷ ಕೇಂದ್ರದ ಉಪನ್ಯಾಸಕ ರವಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಲಕ್ಷಾ ನಾಯ್ಕ ವಂದಿಸಿದರು. ಉಪನ್ಯಾಸಕಿ ಜ್ಯೋತಿ ಗೌಡ, ಶ್ವೇತಾ ಆಚಾರಿ, ಯೋಗಿನಿ ಎಚ್, ಹರ್ಷವರ್ಧನ ಶೆಟ್ಟಿ ಮತ್ತಿತರರು ಇದ್ದರು.