ಕಾರವಾರ: ಇತ್ತಿಚೇಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಉತ್ತಮ ಬಜೆಟ್ ಆಗಿದ್ದು, ಎಲ್ಲ ರಂಗದವರಿಗೂ ಈ ಬಜೆಟ್‍ನಿಂದ ಅನುಕೂಲವಾಗಲಿದೆ ಎಂದು ಬಿಜೆಪಿ ಘಟಕದ ಅಧ್ಯಕ್ಷ ವೆಂಕಟೇಶ್ ನಾಯಕ ಹೇಳಿದ್ದಾರೆ.
ನಗರದ ಪತ್ರಿಕಾಭನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ಸ್ವಾತಂತ್ರ್ಯೋತ್ತರ ಭಾರತದ ನೂರು ವರ್ಷಗಳ ದೂರದೃಷ್ಟಿ ಹೊಂದಿರುವಂಥ ಬಜೆಟ್ ಆಗಿದೆ. 39. 45 ಲಕ್ಷ ಕೋಟಿ ಮೊತ್ತದ ಬಜೆಟ್ ಸಚಿವರು ಮಂಡಿಸಿದ್ದಾರೆ. ಈ ಬಜೆಟ್ ಮುಂದಿನ 25 ವರ್ಷಗಳಲ್ಲಿ ಭಾರತದ ಸಮಗ್ರ ಪ್ರಗತಿಯ ನೀಲನಕ್ಷೆಯನ್ನು ಹೊಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಐದು ನದಿಗಳ ಜೋಡಣೆಗೆ 44 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2022-23ರಲ್ಲಿ 80 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು ಮತ್ತು ಇದಕ್ಕಾಗಿ 48 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಲಾಗುವುದು ಎಂದರು.
ಈ ಹಿಂದೆ ದೇಶದ ಗಡಿ ಕಾಯುವ ಯೋಧರ ಬೂಟ್ ಮತ್ತು ಜಾಕೆಟ್‍ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿತ್ತು ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಈ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರತೆ ಸಾಧಿಸಿದೆ. ಅಷ್ಟೇ ಅಲ್ಲ. ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದೆ. ರಕ್ಷಣಾ ಬಜೆಟ್‍ನಲ್ಲಿ ಶೇಕಡ 25ರಷ್ಟು ಅನುದಾನವನ್ನು ಸಂಶೋಧನೆಗೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದರು.
ಕೆಲವೊಂದು ವಸ್ತುಗಳು ಚೀನಾದಿಂದ ಭಾರತಕ್ಕೆ ಆವದಾಗುತ್ತಿತ್ತು. ಚೀನಾದ ಮೇಲಿನ ಅವಲಂಬನೆ ತಪ್ಪಿಸಲು ಕೇಂದ್ರ ಸರ್ಕಾರ 14 ವಲಯಗಳಿಗೆ ಪ್ರಾಡಕ್ಷನ್ ಲಿಂಕ್ಡ್ ಇನಿಷಿಯೇಟಿವ್ ಯೋಜನೆಯಡಿ 30 ಲಕ್ಷ ಕೋಟಿ ವಿನಿಯೋಗಿಸಲಿದೆ ಇದರಿಂದ ಮುಂದಿನ ವರ್ಷಗಳಲ್ಲಿ 60 ಲಕ್ಷ ಉದ್ಯೋಗಳು ಸೃಷ್ಟಿಯಾಗಲಿವೆ ಎಂದು ಅವರು ಮಾಹಿತಿ ನೀಡಿದರು.
ರೈಲ್ವೆಗೆ ಸಂಬಂಧಿಸಿದಂತೆ ಬಹುತೇಕ ರೈಲು ಬ್ರಿಟಿಷರ ಕಾಲದಲ್ಲಿ ಆರಂಭವಾಗಿರುವ ರೈಲುಗಳು ಇತ್ತು. ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ ದೇಶದಾದ್ಯಂತ 400 ಒಂದೇ ಭಾರತ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ನವೀನಕುಮಾರ ಅಯೋಧ್ಯ, ವಿಶೇಷ ಆಹ್ವಾನಿತ ಮನೋಜ್ ಭಟ್, ನಗರ ಮಂಡಳದ ಅಧ್ಯಕ್ಷ ನಾಗೇಶ್, ಮಹಿಳಾ ಘಟಕದ ನಯನಾ ನೀಲಾವರ ಹಾಜರಿದ್ದರು.
ಸಹೋದರ-ಸಹೋದರಿ ನಡುವೆ ಜಗಳ ಸಾಮಾನ್ಯ:
ಬಿಜೆಪಿಯ ಎಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಅಣ್ಣ-ತಂಗಿಯ ನಡುವೆ ಜಗಳ, ಕಿತ್ತಾಟ ನಡೆಯುವುದು ಸಾಮಾನ್ಯ. ಇಲ್ಲಿಯೂ ಅದೇ ನಡೆದಿದೆ. ನಮ್ಮ ನಡುವೆ ಯಾವುದೇ ಗೊಂದಲವಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಹಾಗೂ ಶಾಸಕಿ ರೂಪಾಲಿ ನಾಯ್ಕ ನಡುವೆ ನಡೆದ ಕಿತ್ತಾಟದ ಬಗ್ಗೆ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ.