ಕಾರವಾರ: ತಾಲೂಕಿನ ಕಣಸಗಿರಿಯ ಖಾಸಗಿ ಜಾಗದಲ್ಲಿ ಯಾವುದೇ ಶವವನ್ನು ಹೂಳದೇ ಜಮೀನನ್ನು ಕಬಳಿಸುವ ಉದ್ದೇಶದಿಂದ ದರ್ಗಾ ಹೆಸರಿನಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸಿ, ಅದನ್ನು ಕಟ್ಟಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ರಾಜ್ಯಾಧ್ಯಕ್ಷ ಬಿ.ಎಸ್.ಪೈ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣಸಗಿರಿಯಲ್ಲಿ ದರ್ಗಾ ಹೆಸರಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದೆ. ಅದನ್ನು ತೆರವುಗೊಳಿಸಬೇಕು ಎಂದು ಜಮೀನಿನ ಮಾಲೀಕರು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಈ ಕೃತ್ಯದಲ್ಲಿ ಪೊಲೀಸ್ ಇಲಾಖೆಯೂ ಶಾಮೀಲಾಗಿದೆ ಎಂಬ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದರು.
ಈ ಭಾಗದ ಒಂದು ಕಡೆ ನದಿಯಿದ್ದು, ಇನ್ನೊಂದು ಭಾಗ ಸಂಪೂರ್ಣ ಅರಣ್ಯದಿಂದ ಆವೃತ್ತವಾಗಿದೆ. ಅಲ್ಲದೇ, ಈ ಭಾಗದಲ್ಲಿ ದಿನನಿತ್ಯ ಅಕ್ರಮ ಗೋ ಸಾಗಾಟ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಆದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಪೊಲೀಸ್ ಇಲಾಖೆಯ ರಕ್ಷಣೆಯಿಂದಲೇ ದರ್ಗಾ ಹೆಸರಿನಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿ, ಜಾಗವನ್ನು ಕಬಳಿಸಿ, ಸ್ಮಗ್ಲಿಂಗ್ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಜಮೀನಿನ ಮಾಲೀಕರು ನೀಡಿದ ಮನವಿಗೆ ಸ್ಪಂದಿಸದ ಪೊಲೀಸರು, ದರ್ಗಾ ಕೆಡವಿದ ಬಗ್ಗೆ ದೂರು ನೀಡಿದ ಕೂಡಲೇ ಕಣಸಗಿರಿಯ ನಿವಾಸಿ ಗೋಕುಲದಾಸ್ ಠಕ್ಕರ್ ಎಂಬ ಅಮಾಯಕನನ್ನು ಶುಕ್ರವಾರ ಸಂಜೆ 5 ಗಂಟೆಗೇ ಠಾಣೆಗೆ ಕರೆದೊಯ್ದಿದ್ದಾರೆ. ಕುಟುಂಬದವರು ನಾಪತ್ತೆ ದೂರು ನೀಡಲು ಮುಂದಾದರೂ ಪೆÇಲೀಸರು ದೂರು ಸ್ವೀಕರಿಸಲು ಸಿದ್ಧರಿರಲಿಲ್ಲ. ಬಳಿಕ ಬೆಳಗ್ಗಿನ ಜಾವ 3.30 ರಿಂದ 4 ಗಂಟೆಯ ಸುಮಾರಿಗೆ ಗೋಕುಲದಾಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಈಗ ಅವರು ಎಲ್ಲಿದ್ದಾರೆ ಎನ್ನುವುದನ್ನೂ ತಿಳಿಯದೇ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಈ ಹಿಂದೆ ನಾವು ಬಿಜೆಪಿಗೆ ಸಹಕಾರ ನೀಡಿದ್ದೇವೆ. ಆದರೆ ಮುಂದೆಯೂ ನೀಡಬೇಕೆಂಬ ನಿಯಮವಿಲ್ಲ. ಸರ್ಕಾರ ಸಹಕಾರ ನೀಡದಿದ್ದರೂ ಸಹ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನಮ್ಮ ಕಾರ್ಯ ನಾವು ಮುಂದುವರೆಸಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ರತನ್ ದುರ್ಗೇಕರ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಗಿದೆ. ಅಲ್ಲದೇ, ಶನಿವಾರ ಫೋನ್ ಮೂಲಕ ಸಂಪರ್ಕಿಸಿದಾಗ ಅರ್ಧ ಗಂಟೆಯ ಬಳಿಕ ಮಾತನಾಡುತ್ತೇನೆ ಎಂದು ತಿಳಿಸಿದ ಸಚಿವರು, ಫೋನ್ ಸ್ವಿಚ್‍ಆಫ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಂಧಿತ ಗೋಕುಲದಾಸ್ ಠಕ್ಕರ್ ಸಹೋದರಿಯರಾದ ಸೇಜನ್ ಸಾಗೇಕರ್ ಮತ್ತು ರೇμÁ್ಮ ಸಾದಿಯೇ ಮಾತನಾಡಿ, ನಾವು ಎಂಟು ಜನ ಸಹೋದರಿಯರು, ಒಬ್ಬ ಸಹೋದರ. ನಮ್ಮ ಸಹೋದರ ಇಲ್ಲಿಯವರೆಗೆ ಯಾವ ತಂಟೆಗೂ ಹೋದವನಲ್ಲ. ಅವರನ್ನು ಪೊಲೀಸರು ಏಕಾಏಕಿ, ಅನಾವಶ್ಯಕವಾಗಿ ಬಂಧಿಸಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ ಎಂದು ಅಳಲು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಹಿಂಜಾವೇ ತಾಲೂಕಾಧ್ಯಕ್ಷ ದಿನೇಶ್ ರಾಣೆ, ಶರತ್ ಬಾಂದೇಕರ್, ಸುನಿಲ್ ತಾಮಸೆ, ಎಲ್.ಕೆ.ನಾಯ್ಕ ಸೇರಿದಂತೆ ಇತರರು ಇದ್ದರು.