ಬನವಾಸಿ : ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ನೂತನ ರಥ ನಿರ್ಮಾಣವಾಗಲಿದ್ದು, ನೂತನ ಮಹಾಸ್ಯನಂದ ರಥದ ಮರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಶನಿವಾರ ನಡೆಯಿತು.
ಮಹಾಸ್ಯಂದ ರಥ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಅಧಿಕೃತ ಚಾಲನೆ ನೀಡಲಾಗಿದ್ದು, 3 ಕೋಟಿ ರೂ ವಚ್ಚದಲ್ಲಿ ರಥ ನಿರ್ಮಾಣವಾಗಲಿದೆ. ದಾಸನಕೊಪ್ಪ ಸರ್ಕಲ್ ನಿಂದ ಬನವಾಸಿಯ ಪ್ರಮುಖ ಬೀದಿಗಳಲ್ಲಿ ರಥಕ್ಕೆ ನಿರ್ಮಾಣವಾಗಲಿರುವ ಮರದ ಮೆರವಣಿಗೆ ನಡೆಯಿತು.
ಡೊಳ್ಳು ಕುಣಿತ ಹಾಗೂ ಪೂರ್ಣಕುಂಬದ ಸ್ವಾಗತ ಮಾಡಲಾಯಿತು. ದೇವಸ್ಥಾನದ ಮುಂಭಾಗ ರಥಕ್ಕೆ ನಿರ್ಮಾಣ ಮಾಡಲಿರುವ ಮರಗಳನ್ನು ತಂದು ಪೂಜೆ ಸಲ್ಲಿಸಲಾಯಿತು. ನಂತರ ರಥ ನಿರ್ಮಿಸಲಿರುವ ಶಿಲ್ಪಿಗಳಿಗೆ ವೀಳ್ಯ ಕೊಟ್ಟು ಅಧಿಕೃತವಾಗಿ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಕುಂಬಾಶಿಯ ಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಅವರಿಗೆ ರಥ ನಿರ್ಮಾಣಕ್ಕೆ ವೀಳ್ಯ ನೀಡಲಾಯಿತು.
1608 ರಲ್ಲಿ ಸೋಂದಾ ರಾಮಚಂದ್ರ ನಾಯಕ ಅವರು ಮಹಾಸ್ಯಂದನ ನೀಡಿದ್ದರು. ಸುಮಾರು 400 ವರ್ಷಕ್ಕೂ ಹಿಂದಿನ ರಥ ಶಿಥಿಲಗೊಂಡ ಹಿನ್ನೆಲೆಯಲ್ಲಿ ನೂತನ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಸಚಿವನಾಗಿರುವ ಸಂದರ್ಭದಲ್ಲಿ ರಥ ನಿರ್ಮಾಣ ಆಗುತ್ತಿರುವುದು ನನ್ನ ಸುದೈವ. ೪೧೫ ವರ್ಷಗಳ ಹಿಂದೆ ರಥ ನಿರ್ಮಾಣ ಮಾಡಲಾಗಿತ್ತು. ಆದರೆ ನನ್ನ ಅಧಿಕಾರಾವಧಿಯಲ್ಲಿ ರಥ ನಿರ್ಮಾಣ ಆಗುತ್ತಿರುವುದು ಭಗವಂತನ ಇಚ್ಚೆಯಾಗಿದೆ. ಇದೊಂದು ದೊಡ್ಡ ಜವಾಬ್ದಾರಿಯಾಗಿದೆ. ಒಳ್ಳೆಯ ಸಮಯದಲ್ಲಿ ಕೆಲಸ ಆರಂಭಿಸಲಾಗಿದೆ. ಆರಂಭದಿಂದ ಕೊನೆಯವರೆಗೂ ರಥ ನಿರ್ಮಾಣಕ್ಕೆ ಬೇಕಾದ ಸಹಕಾರ ಮಾಡುತ್ತೇನೆ. ಇದು ಭಕ್ತರ ರಥ ಆಗಬೇಕು. ದುಡ್ಡಿಡ್ಡದವರ ರಥ ಆಗಬಾರದು. ಕಟ್ಟೆ ಕಡೆಯವ ಬಡವನಿಂದಲೂ ೧೦ ರೂ. ಸಹ ಬೀಳಬೇಕು. ಆಗ ರಥದ ಮೌಲ್ಯ ಹೆಚ್ಚುತ್ತದೆ. ಜನಸಾಮಾನ್ಯರ ರಥ ಇದಾಗಬೇಕು ಎಂದು ಆಶಿಸಿದರು.
ರಥ ಕಳಚುವ ಕೆಲಸದಲ್ಲಿ ಭಾಗಿಯಾದರು ರಥ ನಿರ್ಮಾಣಕ್ಕೆ ಅಲ್ಪ ಸಹಾಯ ಮಾಡಿ ದೇವರ ಕೃಪೆಗೆ ಪಾತ್ರರಾಗಬೇಕು. ಇದು ಜೀವಮಾನದಲ್ಲಿ ಒಮ್ಮೆ ರಥ ಕಟ್ಟುವ ಸಂದರ್ಭ ಇದಾಗಿದೆ. ಸಂತೋಷದಿಂದ ಈ ಕಾಯಕದಲ್ಲಿ ಕರ್ಮಯೋಗಿಯಾಗಿ ಭಾಗವಹಿಸಬೇಕು. ಈ ರಥ ನಿರ್ಮಾಣಕ್ಕೆ ತನುಮನ ಧನ ಸಹಾಯ ಮಾಡುವುದಾಗಿ ತಿಳಿಸಿದ ಹೆಬ್ಬಾರ್, ಈ ನಾಡಿನ ರಥ ಕಟ್ಟಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿ, ಯಾವ ಕಾಲದಲ್ಲಿ ಏನು ಆಗಬೇಕು ಎನ್ನುವುದು ದೇವರ ಇಚ್ಚೆ. ಈ ಹಿಂದೆ ರಥದ ಚಕ್ರ ತುಂಡಾದಾಗ ಸರಿಪಡಿಸಲಾಗಿತ್ತು. ಈಗ ಅದರ ನಿರ್ಮಾಣ ಕಾರ್ಯ ಬಂದಿದೆ. ಧರ್ಮದಲ್ಲಿ ನಂಬಿಕೆ ಇಟ್ಟಾಗ ಒಳ್ಳೆಯದಾಗುತ್ತದೆ. ಆದರೆ ದೊಡ್ಡ ರಥದ ಬದಲಿಗೆ ಬೆಳ್ಳಿ ರಥ ನಿರ್ಮಾಣ ಮಾಡುವುದು ಸೂಕ್ತ. ಮೊದಲಿನಂತೆ ದೊಡ್ಡ ರಥ ಎಳೆಯಲು ಜನರು ಈಗ ಸಿಗುವುದಿಲ್ಲ. ಹಾಗಾಗಿ ದೇವರ ಇಚ್ಚೆಯಂತೆ ಆಗಲಿ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಜಶೇಖರ ಒಡೆಯರ್, ರಥ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಡಿ.ಡಿ.ಭಟ್, ಬನವಾಸಿ ಗ್ರಾಪಂ ಅಧ್ಯಕ್ಷೆ ತುಳಸಿ ಆರೇರ್, ಸಹಾಯಕ ಆಯುಕ್ತ ದೇವರಾಜ ಆರ್., ತಹಶೀಲ್ದಾರ್ ಎಮ್.ಆರ್.ಕುಲಕರ್ಣಿ ಇದ್ದರು.