ಕುಮಟಾ : ವಸತಿ ಯೋಜನೆಯಡಿ 2-3 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಇನ್ನು ಹಣ ಬಿಡುಗಡೆಯಾಗಿಲ್ಲ ಎಂದು ಪುರಸಭೆ ಮಾಜಿ ಛೇರಮೆನ್ ಮತ್ತು ಹಾಲಿ ಸದಸ್ಯ ಅನೀಲ ಹರ್ಮಲಕರ್ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಕ್ಷೇಪಿಸಿದರು.
ಎರಡು ವರ್ಷಗಳ ಹಿಂದೆ ಬಡ ಜನರು ಆಶ್ರಯ ಯೋಜನೆಯಡಿ ಸರ್ಕಾರದಿಂದ ಹಣ ಬರುತ್ತದೆ ಎಂದು ನಂಬಿಕೊಂಡು ತಮ್ಮ ಬಂಗಾರ ಅಡು ಇಟ್ಟು, ವಿವಿಧೆಡೆ ಸಾಲ ಮಾಡಿ ಮನೆ ಕಟ್ಟಲು ಮುಂದಾಗಿದ್ದಾರೆ. ಆದರೆ ಆ ಫಲಾನುಭವಿಗಳಿಗೆ ಈತನ ಹಣ ಬಿಡುಗಡೆಯಾಗಿಲ್ಲ. ಇದರಿಂದ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತುಹೋಗಿದೆ. ಮನೆ ಪೂರ್ಣಗೊಳಿಸಿದರೆ, ಸರ್ಕಾರದಿಂದ ಹಣ ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗುತ್ತದೆ. ಇದರಿಂದ ಅನೇಕರು ತೊಂದರೆ ಅನುಭವಿಸುವಂತಾಗಿದೆ. ಆದರೆ ಈ ಆರ್ಥಿಕ ವರ್ಷದೊಳಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿದೆ. ಇದರಿಂದ ಜನ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಯಾಕೆ ಹಣ ಬಿಡುಗಡೆಯಾಗಿಲ್ಲ ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆಯ ಸಮುದಾಯ ಸಂಘಟಕಿ ಮೀನಾಕ್ಷಿ ಆಚಾರಿ ಅವರು, ವಸತಿ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎರಡು ಯೋಜನೆಗಳಿವೆ. 91 ಫಲಾನುಭವಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಎರಡು ಯೋಜನೆಗಳನ್ನು ಪಡೆಯುವ ಉದ್ದೇಶದಿಂದ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ ಹಣ ಬಿಡುಗಡೆಯಾಗಿಲ್ಲ. ಯಾರು ಒಂದೇ ಯೋಜನೆಜಡಿ ಅರ್ಜಿ ಸಲ್ಲಿಸಿದ್ದಾರೋ ಅವರಿಗೆಲ್ಲ ಹಣ ಬಿಡುಗಡೆಯಾಗಿದೆ. ಅದರಲ್ಲೂ ಕೇಂದ್ರ ಸರ್ಕಾರದ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಂತ ಹಂತವಾಗಿ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಉಪಾಧ್ಯಕ್ಷ ರಾಜೇಶ ಪೈ, ಛೇರಮೆನ್ ಸುಶೀಲಾ ಗೋವಿಂದ ನಾಯ್ಕ, ಮುಖ್ಯಾಧಿಕಾರಿ ಸುರೇಶ ಎಂ ಕೆ, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.