ಅಂಕೋಲಾ : ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್ ಗೆ ಗುದ್ದಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಕಲಚೇತನ ವ್ಯಕ್ತಿಯೋರ್ವ ಮೃತ ಪಟ್ಟು ಇನ್ನೊರ್ವ ಗಾಯಗೊಂಡ ಘಟನೆ ತಾಲೂಕಿನ ಅವರ್ಸಾ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಪಟ್ಟಣದ ಅಜ್ಜಿಕಟ್ಟಾ ನಿವಾಸಿ ನಿಜಾಮುದ್ದೀನ್ ಯಾನೆ ರಿಜ್ವಾನ ಅಜಿಮುದ್ದೀನ್ ಶೇಖ್ (36) ಮೃತ ದುರ್ದೈವಿಯಾಗಿದ್ದು, ವಿಕಲಚೇತನಾಗಿದ್ದ ಈತ ಗುಜರಿ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ. ಕಾರವಾರದಲ್ಲಿ ಅಬಕಾರಿ ಇಲಾಖೆಯಿಂದ ಗುಜರಿ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರ್ಸಾದಲ್ಲಿ ಎರಡು ಆಕಳುಗಳು ಅಕಸ್ಮಾತ್ ರಸ್ತೆಗೆ ಅಡ್ಡವಾಗಿ ನುಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್ ಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಜ್ವಾನನನ್ನು ಐ.ಆರ್. ಬಿ ಆಂಬ್ಯುಲೆನ್ಸ್ ಮೂಲಕ ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಕ್ಸಿಜನ್ ವ್ಯವಸ್ಥೆಯಲ್ಲಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ತಲೆ ಭಾಗದಲ್ಲಿ ವಿಪರೀತ ರಕ್ತಸ್ರಾವ ಆದ ಪರಿಣಾಮ ಆತ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಕಾರು ಚಾಲಕ ಶೇಖ ಫೈಯಾಜ್ ಉಸ್ಮಾನ್ ಶೇಖ(67) ಕಾರಿನಲ್ಲಿದ್ದ ಸಹ ಪ್ರಯಾಣಿಕ ಅಶೋಕ ಶೇಣ್ವಿ(63) ಎಂಬಾತನಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಕೋಲಾ ಪೋಲೀಸರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.