ಕಾರವಾರ: ನಗರದ ವಿವಿಧ ಭಾಗಗಳ ಬೀದಿ ಬದಿಯಲ್ಲಿ ಪರವಾನಿಗೆಯಿಲ್ಲದೇ ಹಣ್ಣು ಹಾಗೂ ತರಕಾರಿ ವ್ಯಾಪಾರ ಮಾಡುತಿದ್ದ 6 ಕ್ಕೂ ಅಧಿಕ ವ್ಯಾಪಾರಸ್ಥರಿಗೆ ನಗರಸಭೆಯು ದಂಡ ವಿಧಿಸಿ, ಎಚ್ಚರಿಸಿದ ಘಟನೆ ಗುರುವಾರ ನಡೆದಿದೆ.
ನಗರದ ಬೀದಿಬದಿ ವ್ಯಾಪಾರಸ್ಥರ ಸಂಘವು ಪರವಾನಿಗೆ ಇಲ್ಲದ ವಿವಿಧ ಭಾಗಗಳ ವ್ಯಾಪಾರಸ್ಥರಿಂದ ತಮ್ಮ ದಿನದ ಆದಾಯಕ್ಕೂ ತೊಂದರೆಯಾಗುತ್ತಿದೆ ಎಂದು ನಗರಸಭೆಗೆ ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ನಗರದ ಲಂಡನ್ ಬ್ರಿಡ್ಜ್, ಕಾಳಿ ಸೇತುವೆ ಹಾಗೂ ಕೆಎಸ್ ಆರ್ ಟಿ ಸಿ ಡಿಪೋ ಬಳಿಯಿರುವ ಪರವಾನಿಗೆ ಇಲ್ಲದ ಬೀದಿಬದಿ ವ್ಯಾಪಾರಸ್ಥರರಿಗೆ ಅಂಗಡಿ ಬಂದ್ ಮಾಡುವಂತೆ ಎಚ್ಚರಿಸಿ, ದಂಡ ವಿಧಿಸಿದ್ದಾರೆ.
ಅಲ್ಲದೇ, ಬೀದಿಬದಿ ವ್ಯಾಪಾರಸ್ಥರು ತಮ್ಮ ಮೂಲ ದಾಖಲೆ ಹಾಗೂ ಫೋಟೋ ನೀಡಿದರೆ ಪರವಾನಿಗೆ ಮಾಡಿಕೊಡುವ ಬಗ್ಗೆ ನಗರಸಭೆ ಆಯುಕ್ತರು ತಿಳಿಸಿದ್ದಾರೆ.