ಶಿರಸಿ: ಗುಣಮಟ್ಟದ ಕಾಳು ಮೆಣಸು ಬೆಳೆದು, ಬಳ್ಳಿಗೆ ಅಗತ್ಯವಾದ ಸ್ಪಂದನೆ ನೀಡಿದರೆ ಕಾಳು ಮೆಣಸಿನಲ್ಲಿ ಯಾವುದೇ ರೈತರು ಹಿಡಿತ ಸಾಧಿಸಬಹುದು ಎಂದು ಕಾಳು ಮೆಣಸಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಶಿವಮೊಗ್ಗದ ಜೋಮಿ ಮ್ಯಾಥ್ಯೂಸ್ ಸಲಹೆ ಮಾಡಿದರು.
ಕಪ್ಪು ಬಂಗಾರ ಹಾಗೂ ಇತರೇ ಕೃಷಿಯಲ್ಲಿ ಮಾಡಿದ ಸಾಧನೆ ಗಮನಿಸಿ ಅಂತರಾಷ್ಟ್ರೀಯ ಮಟ್ಟದ ಐಪಿಸಿ ಪ್ರಶಸ್ತಿ ಪುರಸ್ಕತರಾದ ಅವರು ನಗರದ ಕದಂಬ ಮಾರ್ಕೇಟಿಂಗ್‍ನಲ್ಲಿ ಶುಕ್ರವಾರ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಕಾಳುಮೆಣಸು ಹೆಚ್ಚಿನ ಲಾಭದ ಬೆಳೆಯಾಗಿ ಕಾಳುಮೆಣಸನ್ನು ಗುಣಮಟ್ಟದ ಆಧಾರದಲ್ಲಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಕದಂಬದ ಪಾತ್ರ ಬಹಳ ದೊಡ್ಡದು. ಇಂಥ ಸಹಕಾರಿ ಸಂಸ್ಥೆಗಳಿಂದ ರೈತರಿಗೂ ಆರ್ಥಿಕ ನೆರವಾಗಿ ಕೃಷಿಯಲ್ಲಿ ಮತ್ತಷ್ಟು ಸಾಧನೆ ಮಾಡುವ ಉತ್ಸಾಹ ದಟ್ಟವಾಗುತ್ತದೆ ಎಂದರು.
ಕೃಷಿ ವಿಜ್ಞಾನಿ ಡಾ. ವೇಣುಗೋಪಾಲ ಮಾತನಾಡಿ, ಕೃಷಿಯಲ್ಲಿ ನಿರಂತರತೆ ಇದ್ದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಮ್ಯಾಥ್ಯೂ ದೊಡ್ಡ ಉದಾಹರಣೆ. ಮಣ್ಣಿನ ಸಿದ್ಧತೆ ಮತ್ತು ನೀರಿನ ನಿರ್ವಹಣೆ ಕಾಳು ಮೆಣಸಿನ ಬೆಳೆಗೆ ಅತ್ಯಂತ ಮಹತ್ವದ್ದು ಎಂದರು.
ಅಪ್ಪಂಗಳದ ಮುಖ್ಯಸ್ಥ ಡಾ. ಎಸ್ ಜೆ ಅಂಕೇಗೌಡ, ಕಾಳು ಮೆಣಸಿನ ಜೊತೆ ಏಲಕ್ಕಿ ಕೂಡ ಬೆಳೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕದಂಬ ಮಾರ್ಕೆಟಿಂಗ್ ನಿರ್ದೇಶಕ ನಾರಾಯಣ ಗಡಿಕೈ, ಕರ್ನಾಟಕ ಇಂದು ಕಾಳುಮೆಣಸು ಕೃಷಿಯಲ್ಲಿ ಕೇರಳವನ್ನೂ ಹಿಂದಿಕ್ಕಿದೆ ಎಂದರೆ ಇದಕ್ಕೆ ಕಾರಣ ಡಾ. ವೇಣುಗೋಪಾಲರವರು ಎಂದರು.
ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳಾದ ಅರುಣ, ಮಹಾಬಲೇಶ್ವರ ಹೆಗಡೆ, ಸೀತಾರಾಮ ಹೆಗಡೆ ನೀರ್ನಳ್ಳಿ, ಸುಧೀರ ಬಲ್ಸೆ, ಶ್ರೀಧರ ಭಟ್ಟ ಚವತ್ತಿ, ರವಿ ಭಟ್ಟ ಕಾನಗೋಡು, ಡಾ. ಸುಧೀಶ ಕುಲಕರ್ಣಿ, ಆರ್.ಎಂ.ಹೆಗಡೆ ಗಡೀಕೈ ಮತ್ತಿತರ 40ಕ್ಕೂ ಹೆಚ್ಚು ಕಾಳುಮೆಣಸು ಕೃಷಿಕರು ಸಂವಾದದಲ್ಲಿ ಭಾಗವಹಿಸಿ ಮಾಹಿತಿ ವಿನಿಮಯ ಮಾಡಿಕೊಂಡರು.
ಕದಂಬದ ವಿಶ್ವೇಶ್ವರ ಭಟ್ಟ ಕೋಟೆಮನೆ ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ಜೋಶಿ ನಿರೂಪಿಸಿದರು. ಶ್ವೇತಾ ಹೆಗಡೆ ಪ್ರಾರ್ಥಿಸಿದರು.
ನಾರಾಯಣ ಹೆಗಡೆ ಗಡೀಕೈ, ನಿರ್ದೇಶಕರು, ಕದಂಬ
ಕಾಳು ಮೆಣಸು ತಜ್ಞ, ಹಲವರಿಗೆ ಕಾಳು ಮೆಣಸು ಕೃಷಿಗೆ ಪ್ರೇರಣೆ ನೀಡಿ ಮಾರ್ಗದರ್ಶನ ಮಾಡುತ್ತಿರುವ ಡಾ. ವೇಣುಗೋಪಾಲ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕು. ಕಾಳುಮೆಣಸು ಬೆಳೆಗಾರರು, ಜನಪ್ರತಿನಿಧಿಗಳು ಒಟ್ಟಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಿದೆ.