ಅಂಕೋಲಾ : ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ತಾಲೂಕಿನ ರೈತರಿಗೆ ಆಪದ್ಭಾಂಧವರಾಗಿ ಕಾರ್ಯ ನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿ ಕೃಷ್ಣಮೂರ್ತಿ ಹೆಗಡೆ ಇವರನ್ನು ತಾಲೂಕಿನಿಂದ ವರ್ಗಾವಣೆ ಮಾಡದಂತೆ ಕೋರಿ ರೈತ ಸಮೂಹದವರು ಅಂಕೋಲಾ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಶು ವೈದ್ಯಾಧಿಕಾರಿ ಕೃಷ್ಣಮೂರ್ತಿ ಹೆಗಡೆ ಕಳೆದ ನಾಲ್ಕು ವರ್ಷಗಳಿಂದ ಅಂಕೋಲಾ ಪಶುಚಿಕಿತ್ಸಾಲಯದಲ್ಲಿ ಪಶುವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ ರೈತರು ಸಾಕಿದ ಆಕಳು, ಎಮ್ಮೆ ಇನ್ನಿತರ ಸಾಕು ಪ್ರಾಣಿಗಳಿಗೆ ಏನಾದರೂ ರೋಗರುಜಿನಗಳು ಬಂದಾಗ ಸ್ವತಃ ವೈದ್ಯಾಧಿಕಾರಿಯವರೇ ರೈತರ ಮನೆಗಳಿಗೆ ಹೋಗಿ ಮೂಕ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿಕೊಂಡು ಸೂಕ್ತ ಉಪಚಾರ ಮಾಡುತ್ತಾರೆ. ಇಂತಹ ಪಶು ವೈದ್ಯಾಧಿಕಾರಿಗಳ ಸೇವೆ ತಾಲೂಕಿನ ರೈತರಿಗೆ ಅನುಕೂಲಕರವಾಗಿದ್ದು ಅವರನ್ನು ವರ್ಗಾವಣೆ ಮಾಡದಂತೆ ಸರಕಾರಕ್ಕೆ ಮನವರಿಕೆ ಮಾಡಬೇಕೆಂದು ಕೋರಿ ರೈತರು ಮನವಿ ಸಲ್ಲಿಸಿದ್ದಾರೆ. ತಾಲೂಕ ದಂಡಾಧಿಕಾರಿ ಉದಯ ಕುಂಬಾರ ಮನವಿಯನ್ನು ಸ್ವೀಕರಿಸಿ ಸರಕಾರಕ್ಕೆ ರವಾನಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂತೋಷ ಭೂಪತಿ ಗಾಂವಕರ, ಜಯಶ್ರೀ ಗಾಂವಕರ, ಮಂಜುನಾಥ ವಿ ನಾಯ್ಕ, ಶೈಲಾ ಜಿ ನಾಯ್ಕ, ಸುಜಾತಾ ನಾಯ್ಕ, ಮದನ ಗಾಂವಕರ, ಆಶಾ ಗಾಂವಕರ, ಗುರು ಆಗೇರ ಇನ್ನಿತರ ರೈತರು ಇದ್ದರು.