ಹೊನ್ನಾವರ : ಅಪರೂಪದ ರಿಡ್ಲೆ ಜಾತಿಯ ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದ ಹತ್ತಿರ ಇತ್ತೀಚೆಗೆ ಯೋಜನಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣ ಕಾರ್ಯ ಆರಂಬಿಸುವ ಸಂದರ್ಭದಲ್ಲಿ ಇಲ್ಲಿನ ಕಡಲತೀರದಲ್ಲಿ ಮಣ್ಣು ಸುರಿಯಬೇಡಿ ಈ ಪ್ರದೇಶದಲ್ಲಿ ಕಡಲಾಮೆಗಳು ಮೊಟ್ಟೆ ಇಡುತ್ತವೆ ಎಂದು ಸಹಾಯಕ ಆಯುಕ್ತರ ಗಮನ ಸೆಳೆದು ಕಡಲತೀರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ತಡೆ ಒಡ್ಡಿದ್ದರು.
ಇದೇ ಸ್ಥಳದ ತೀರ ಸನೀಹದಲ್ಲಿ ಎರಡಕ್ಕೂ ಹೆಚ್ಚು ಸಂಖ್ಯೆಯ ರಿಡ್ಲೆ ಜಾತಿಯ ಕಡಲಾಮೆಗಳು 350 ಕ್ಕೂ ಹೆಚ್ಚು ಮೊಟ್ಟೆಗಳು ಇಟ್ಟಿರುವ ಕುರುಹುಗಳು ಪತ್ತೆಯಾಗಿವೆ. ಸುಧ್ಧಿ ತಿಳಿದ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಕಡಲಾಮೆಗಳ ಮೊಟ್ಟೆಇಟ್ಟಿರುವ ಪ್ರದೇಶದಲ್ಲಿ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಆರಂಭಿಸಿದ್ದು ಈ ಒಂದು ತಿಂಗಳ ಅವಧಿಯಲ್ಲಿ 8ಕ್ಕೂ ಹೆಚ್ಚು ಆಮೆಗಳು ಸುಮಾರು 1500ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಕ್ರಮ ಕೈಗೊಂಡು ದಾಖಲೀಕರಣಕ್ಕೂ ವ್ಯವಸ್ಥೆ ಮಾಡಿದ್ದಾರೆ.
ಇತ್ತೀಚೆನ ಈ ಬೆಳವಣಿಗೆಯು ವಾಣಿಜ್ಯ ಬಂದರು ವಿವಾದಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದ್ದು ಬಂದರು ವಿರೋಧಿ ಹೋರಾಟಗಾರರ ಕಾನೂನು ಹೋರಾಟಕ್ಕೆ ಬಲಬಂದಿದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. ರಿಡ್ಲೆ ಜಾತಿಯ ಆಮೆಗಳ ಮೊಟ್ಟೆಗಳು ಇತ್ತೀಚೆಗೆ ಪೊಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲು ಸಹ ಪತ್ತೆಯಾಗಿದ್ದವು. ಇತ್ತೀಚಿನ ಒಂದು ವಾರದ ಅವಧಿಯಲ್ಲಿ ಮೂರಕ್ಕೂ ಹೆಚ್ಚು ರಿಡ್ಲೆ ಜಾತಿಯ ಕಡಲಾಮೆಗಳು ರಕ್ತಸಿಕ್ತ ಅವಸ್ಥೆಯಲ್ಲಿ ಇಲ್ಲಿನ ಕಡಲತೀರದಲ್ಲಿ ಸಾವನ್ನಪ್ಪಿದ್ದವು. ಆಮೆಗಳ ಸಾವಿನ ವಿಚಾರವನ್ನು ಸರ್ಕಾರ ಕೂಡಲೇ ತನಿಖೆಗೆ ಒಳಪಡಿಸಬೇಕೆಂದು ಸ್ಥಳೀಯರು ಆಗ್ರಹ ಪಡಿಸಿರುವದನ್ನು ಇಲ್ಲಿ ಸ್ಮರಿಸಬಹುದು.