ಅಂಕೋಲಾ : ತಾಲೂಕಿನ ಕನಸೆಗದ್ದೆಯ ಶ್ರೀ ನರಸಿಂಹ ದೇವರ ಹಾಗೂ ಹೊನ್ನೇಕೇರಿಯ ರಾಮನಾಥ ದೇವರ ರಥೋತ್ಸವವು ಸೋಮವಾರ ವಿಜ್ರಂಭಣೆಯಿಂದ ನಡೆಯಿತು.
ಪ್ರತೀ ವರ್ಷ ರಥಸಪ್ತಮಿಯಂದು ನಡೆಯುವ ಈ ಉತ್ಸವವು ಹಲವು ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಆಚರಣೆಗಳಿಗೆ ಸಾಕ್ಷಿಯಾಗುತ್ತದೆ. ಫೆ.1 ರಿಂದ ಏಳು ದಿನಗಳ ಕಾಲ ನರಸಿಂಹ ದೇವರ ಭಜನಾ ಸಪ್ತಾಹದ ಅಂಗವಾಗಿ ಅಂತಿಮ ದಿನ ಫೆ.7ರಂದು ದೀಪೋತ್ಸವ ಹಾಗೂ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಫೆ.1 ರಂದು ನರಸಿಂಹ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಯಿತು. ಸಪ್ತಾಹದ ಅಂಗವಾಗಿ ಈ ವರ್ಷದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ವೃಕ್ಷಮಾತೆ ಪದ್ಮಶ್ರೀ ತುಳಸೀ ಗೌಡ ಉದ್ಘಾಟಿಸಿದರು.
ಅಂದು ತುಳಸೀ ಗೌಡ, ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ, ಕಲಾವಿದರಾದ ಮಂಜುನಾಥ ಜಾಂಬಳೇಕರ, ಮಂಜುನಾಥ ಜೆ ನಾಯ್ಕ ಹಾಗೂ ಶ್ರೀ ದೇವರ ಸೇವಾಕಾರ್ಯಕರ್ತ ಈರು ಭೋವಿಯವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರಂಗಾರ ಜ್ಯುವೆಲರ್ಸ ಪ್ರಯೋಜಕತ್ವದಲ್ಲಿ ಛದ್ಮವೇಷ ಸ್ಪರ್ಧೆಯನ್ನು ನಡೆಸಲಾಯಿತು.
ಫೆ.2 ರಂದು ಶಾಂತಲಾ ನಾಡಕರ್ಣಿ ಪ್ರಾಯೋಜಕತ್ವದಲ್ಲಿ ಮಹಿಳಾ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಫೆ.3 ರಂದು ಸಾಂಸ್ಕ್ರತಿಕ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಫೆ.4 ರಂದು ಶ್ರೀ ನರಸಿಂಹ ದೇವಸ್ಥಾನದಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಅರಿಶಿಣ ಕುಂಕುಮ ಕಾರ್ಯಕ್ರಮ ನಡೆಸಲಾಯಿತು.
ಫೆ. 5 ರಂದು ಗ್ರಾಮೀಣ ಕ್ರೀಡಾಕೂಟವನ್ನು ನಡೆಸಲಾಯಿತು. ಫೆ.6 ರಂದು ರಂಗೋಲಿ ಸ್ಪರ್ಧೆಯನ್ನು ನಡೆಸಲಾಯಿತು.
ಫೆ.7 ರಂದು ದೀಪೋತ್ಸವ, ರಥೋತ್ಸವ ಮತ್ತು ರಾತ್ರಿ ಭಾರತೀ ಕಲಾ ನಾಟ್ಯ ಸಂಘದಿಂದ ಸರ್ಪ ಸಿಂಧೂರ ಎಂಬ ನಾಟಕ ಪ್ರದರ್ಶನ ನಡೆಯಿತು.
ಸರ್ವ ಧರ್ಮಗಳ ಸಮನ್ವಯತೆಗೆ ಸಾಕ್ಷಿಯಾಗಿರುವ ಕನಸೆಗದ್ದೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜಾತಿ ಜನಾಂಗದವರು ಸಮ್ಮಿಳಿತವಾಗಿರುವ ಈ ಊರಿನಲ್ಲಿ ಎಲ್ಲ ಸಮಾಜದವರೂ ಸೇರಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಈ ಉತ್ಸವವನ್ನು ಆಚರಿಸಿಕೊಂಡು ಬಂದಿರುವದಲ್ಲದೆ ಮುಸ್ಲಿಂ ಬಾಂಧವರೂ ಕೂಡ ಪಾಲ್ಗೊಳ್ಳುತ್ತ ಬಂದಿರುವದು ವಿಶೇಷ.
ಮುಂದಿನ 2023-24 ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಆಚರಿಸಲ್ಪಡುತ್ತಿದೆ. ಗಂಗಾಧರ ಅಂಕೋಲೆಕರ ಇವರನ್ನು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು ಬಹಳ ವೈಶಿಷ್ಠ್ಯಪೂರ್ಣವಾಗಿ ಆಚರಿಸಲಾಗುವದು.