ಅಂಕೋಲಾ : ತಾಲೂಕಿನ ಮಂಜಗುಣಿಯಲ್ಲಿ ಪುನೀತ ರಾಜಕುಮಾರ ಅಭಿಮಾನಿ ಬಳಗದ ವತಿಯಿಂದ ಫೆ.11 ರಂದು ಸಂಜೆ 4 ಗಂಟೆಗೆ ಪುನೀತ ರಾಜಕುಮಾರ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಬುಧವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ಟಿ. ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಶಿಲೆಯಿಂದ ಪುನೀತ ರಾಜಕುಮಾರ ಅವರ ಪುತ್ಥಳಿಯನ್ನು ಮಾಡಿದ್ದೇವೆ. ಅವರು ಕೇವಲ ನಟರಾಗಿ ಮಾತ್ರ ಗುರುತಿಸಿಕೊಳ್ಳದೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಇವರ ಅಕಾಲಿಕ ಸಾವು ಇನ್ನು ಅಗರಿಸಿಕೊಳ್ಳಲಾಗದ ಸಂಗತಿಯಾಗಿದೆ ಎಂದರು.
ಸಮಿತಿಯ ಅಧ್ಯಕ್ಷ ನಾಗರಾಜ ಮಂಜಗುಣಿ ಮಾತನಾಡಿ, ಪುತ್ಥಳಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅನಾವರಣಗೊಳಿಸಲಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಪುನೀತ ರಾಜಕುಮಾರ ಅವರ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ‘ಪುನೀತ ನುಡಿನಮನ’ ಕವನ ಸಂಕಲನ ಬಿಡುಗಡೆಗೊಳಿಸಲಿದ್ದಾರೆ. ಸಾಹಿತಿ ಡಾ. ರಾಮಕೃಷ್ಣ ಗುಂದಿ ಕೃತಿ ಪರಿಚಯಿಸಲಿದ್ದು, ಪುನೀತ ರಾಜಕುಮಾರ ಅವರ ಭಾವ ರವಿರಾಜ ನಾಯಕ ನೇತ್ರದಾನ ಪ್ರಮಾಣ ಪತ್ರ ವಿತರಿಸಲಿದ್ದಾರೆ ಎಂದರು.
ಸಮಿತಿಯ ಕಾರ್ಯದರ್ಶಿ ಪ್ರಶಾಂತ ವಿ. ನಾಯ್ಕ ಮಾತನಾಡಿ, ಪುತ್ಥಳಿ ನಿರ್ಮಾಣದ ಜತೆಗೆ ನೇತ್ರದಾನ ನೋಂದಣಿ ಹಮ್ಮಿಕೊಂಡಿದ್ದು, ಕಾರ್ಯಕ್ರಮದಂದು ನೋಂದಣಿಯಾದ ಹಿರಿಯವರಿಗೆ ಮತ್ತು ಕಿರಿಯವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಜೊತೆಗೆ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ವೆಂಕಟ್ರಮಣ ಕೆ. ನಾಯ್ಕ, ಮಂಜುನಾಥ ಆರ್. ನಾಯ್ಕ, ಪ್ರವೀಣ ವಿ. ನಾಯ್ಕ, ಗಣೇಶ ವಿ. ನಾಯ್ಕ, ರವಿ ಎನ್. ನಾಯ್ಕ, ಮಧುಕೇಶ್ವರ ವಿ. ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.