ಹೊನ್ನಾವರ : ಜೀವಬೆದರಿಕೆ ಹಿನ್ನೆಲೆಯಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳದಿಪುರದ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಹಾಗೂ ಸದಸ್ಯರೆಲ್ಲರೂ ಶಿಕ್ಷಣಾಧಿಕಾರಿಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಶಿಕ್ಷಕಿಯ ಪತಿಯಿಂದ ಎಸ್.ಡಿ.ಎಂ.ಸಿ ಅಧ್ಯಕ್ಷನ ಮೇಲೆ ಶಾಲೆ ವಿಚಾರವಾಗಿ ಹಲ್ಲೆ ನಡೆದಿದ್ದು ವಿದ್ಯಾರ್ಥಿಗಳ ಪಾಲಕರು ಹಾಗೂ ಎಸ್.ಡಿ.ಎಂ.ಸಿ ಯವರು ಶಿಕ್ಷಕಿಯನ್ನು ಶಾಲೆಯಿಂದ ವರ್ಗಾವಣೆ ಮಾಡುವಂತೆ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದ್ದರು. ಮನವಿ ಸ್ವೀಕರಿಸಿದ ಶಿಕ್ಷಣಾಧಿಕಾರಿಗಳು ತಾನು ಕೂಡಲೇ ಕ್ರಮ ಕೈಗೊಳ್ಳುತ್ತೇನೆ, ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡುತ್ತೇನೆ ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು.
ಒಂದು ವಾರದ ನಂತರ ಶಿಕ್ಷಕಿ ಮತ್ತದೇ ಶಾಲೆಗೆ ಬಂದಿರುವುದನ್ನು ಎಸ್.ಡಿ.ಎಂ.ಸಿ. ಯವರು ಶಿಕ್ಷಣಾಧಿಕಾರಿಗಳನ್ನು ಹಾಗೂ ಮುಖ್ಯ ಶಿಕ್ಷಕಿಯನ್ನು ಪ್ರಶ್ನಿಸಿದಾಗ ಆ ಶಿಕ್ಷಕಿ ರಜೆಗೆ ಹೋಗಿದ್ದರು ಅವರಿಗೆ ಬೇರೆ ಯಾವುದೇ ಶಾಲೆಗೆ ನಿಯೋಜನೆ ಆಗಿಲ್ಲ ಎನ್ನುವ ಉತ್ತರ ಕೇಳಿ ಆಕ್ರೋಶಿತರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಿಕ್ಷಣಾಧಿಕಾರಿಗಳು ಎಸ್.ಡಿ.ಎಂ.ಸಿ ಯವರೊಂದಿಗೆ ಸುಳ್ಳು ಹೇಳಿದ್ದಾರೆ ಎಂದು ಸದಸ್ಯರು ಶಿಕ್ಷಣಾಧಿಕರಿಗಳಿಗೆ ಸಭೆ ನಡೆಸುವಂತೆ ಠರಾವು ಮಾಡಿ ಬುಧವಾರ ಸಭೆ ನಡೆಸಿದರು.
ಸಭೆಯಲ್ಲಿ ಶಿಕ್ಷಣಾಧಿಕಾರಿಗಳು ಆರೋಪಿ ಶಿಕ್ಷಕಿ ಪರವಾಗಿ ನಿಂತಿರುವುದು ಎಸ್.ಡಿ.ಎಂ.ಸಿ ಯವರನ್ನು ಮತ್ತಷ್ಟು ಕೇರಳಿಸಿದ್ದಲ್ಲದೆ ಕೆಲ ಸದಸ್ಯರಿಗೆ ಸಭೆಗೆ ಹಾಜರಾಗದಂತೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಹೇಳುತ್ತಿದ್ದಂತೆ ಎಲ್ಲಾ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದರು.
ಗಣಪತಿ ಹಳದಿಪುರ, ಎಸ್.ಡಿ.ಎಂ.ಸಿ ಅಧ್ಯಕ್ಷ :
ದೈಹಿಕ ಶಿಕ್ಷಕಿಯ ಪತಿ ಶಾಲೆಯ ವಿಚಾರವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದೇನೆ. ಠಾಣೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಇತ್ತ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಮಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸುವ ಬದಲು ತಪ್ಪಿತಸ್ಥರ ಪರವಾಗಿ ನಿಂತಿದ್ದಾರೆ. ನಮಗೆ ಅನ್ಯಾಯವಾಗಿದ್ದು ಜೊತೆಯಲ್ಲಿ ಜೀವ ಬೆದರಿಕೆ ಇರುವುದರಿಂದ ನಾವು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ.