ಅಂಕೋಲಾ : ತಾಲೂಕ ಪಂಚಾಯತದ ಮಾಸಿಕ ಕೆಡಿಪಿ ಸಭೆ ಬುಧವಾರ ತಾ.ಪಂ.ಸಭಾಭವನದಲ್ಲಿ ನಡೆಯಿತು.
ಆಡಳಿತಾಧಿಕಾರಿ ನಾಗೇಶ ರಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯಿತು. ಆರೋಗ್ಯಾಧಿಕಾರಿ ಡಾ. ನಿತಿನ ಹೊಸ್ಮಲಕರ ಆರೋಗ್ಯ ಇಲಾಖೆಯ ವರದಿ ನೀಡಿ ತಾಲೂಕಿನಲ್ಲಿ ಕೋವಿಡ್ ಗಣನೀಯವಾಗಿ ಇಳಿಕೆಯಾಗಿದ್ದು ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಮಾತ್ರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಸದ್ಯ ನಾಲ್ಕು ಸೋಂಕಿತರು ಮಾತ್ರ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕೋವಿಡ್ ಕಾರಣ ನೀಡಿ ನಿರಂತರವಾಗಿ ನಡೆಯಬೇಕಾದ ಆರೋಗ್ಯ ಶಿಬಿರಗಳನ್ನು ಕಡೆಗಣಿಸಬೇಡಿ ಎಂದು ನಾಗೇಶ ರಾಯ್ಕರ ಸೂಚಿಸಿದರು. ಅಂಧತ್ವ ನಿವಾರಣೆ, ಕುಟುಂಬ ಕಲ್ಯಾಣ, ಚುಚ್ಚುಮದ್ದು, ಪೋಲಿಯೊ ಮುಂತಾದ ಹಲವು ಶಿಬಿರಗಳ ಪ್ರಗತಿಯಲ್ಲಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸೂಚನೆ ನೀಡಿದ ಅವರು ಯಾವುದೇ ಇಲಾಖೆಗಳು ಕೋವಿಡ್ ಕಾರಣ ನೀಡಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದೆ ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ಕಾರ್ಯಕ್ರಮಗಳನ್ನು ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ ಮುಂಬರುವ ಪರೀಕ್ಷೆಗಳ ಪೂರ್ವಸಿದ್ದತೆಗಳನ್ನು ಹಮ್ಮಿಕೊಂಡಿದ್ದು ಈ ಸಲ ಕೋವಿಡ್ ಪೂರ್ವದಲ್ಲಿದ್ದಂತೆ ಹಳೆಯ ಪದ್ದತಿಯಲ್ಲೇ ಪರೀಕ್ಷೆಗಳು ನಡೆಯುತ್ತವೆ ಹೀಗಾಗಿ ತಾಲೂಕಿನ ಶಾಲಾ ಮುಖ್ಯಾಧ್ಯಾಪಕರ ಸಭೆ ಕರೆದು ಮಾಹಿತಿ ನೀಡಲಾಗುತ್ತಿದೆ ಹಾಗೂ ಅವಶ್ಯವಿದ್ದ ಕಡೆ ಬಸ್ಸಿನ ಅನುಕೂಲತೆಯ ಬಗ್ಗೆಯೂ ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಲಾಗಿದೆ ಎಂದರು.
ಮೀನುಗಾರಿಕೆ ಇಲಾಖೆ ಅಧಿಕಾರಿ ರೆನಿಟಾ ಡಿಸೋಜಾ ಮಾತನಾಡಿ ಕೇಂದ್ರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ತಾಲೂಕಿನ ಬೇಳಾದ ಹಳ್ಳದಲ್ಲಿ ನೀಲಿ ಕಲಗ ಬೆಳೆಸುವ ಘಟಕವನ್ನು ಪ್ರಾರಂಭಿಸಲಾಗಿದ್ದು ಅಗಸೂರಿನಲ್ಲಿ ಕೃತಕವಾಗಿ ರಾಸ್ ಬಯಾ ಪ್ಲಾಟ್ ಪದ್ದತಿಯಲ್ಲಿ ಫೈಬರ್ ಯಾ ಸಿಮೆಂಟ್ ಟ್ಯಾಂಕುಗಳಲ್ಲಿ ಮೀನುಗಳನ್ನು ಬೆಳೆಸುವ ಅಂದಾಜು ರೂ.50ಲಕ್ಷ ವೆಚ್ಚದ ಘಟಕವೊಂದನ್ನು ಪ್ರಾರಂಭಿಸಲಾಗುತ್ತಿದೆ. ಈ ಘಟಕದಲ್ಲಿ ಕಾಂಗಳಸಿ, ತಿಲ್ಲಾಪಿಯಾ, ಸಿಗಡಿಗಳನ್ನು ಬೆಳೆಸಲಾಗುತ್ತದೆ. ಹಾಗೂ
ಬೇಲೆಕೇರಿಯಲ್ಲಿ ಅಂದಾಜು ರೂ.1 ಕೋಟಿ ವೆಚ್ಚದ ಐಸ್ ಪ್ಲಾಂಟ್ ನಿರ್ಮಿಸುವ ಬಗ್ಗೆಯೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಾಲೂಕಿನ 703 ಮೀನುಗಾರರಿಗೆ ಕಳೆದ ಸಾಲಿನ ಕೋವಿಡ್ ಪರಿಹಾರವಾಗಿ ತಲಾ ಮೂರು ಸಾವಿರದಂತೆ ಅವರ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಿದರು. ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಭಾರತೀ ನಾಯಕ ಯಾವುದೇ ಸಭೆಗಳಿಗೆ ಹಾಜರಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆಡಳಿತಾಧಿಕಾರಿ ನಾಗೇಶ ರಾಯ್ಕರ ನೋಟೀಸ್ ನೀಡಲು ಸೂಚಿಸಿದರು.
ಉಳಿದಂತೆ ವಿವಿಧ ಇಲಾಖೆಗಳಾದ ಸಾರಿಗೆ ಇಲಾಖೆ, ವಿದ್ಯುತ್, ನೀರು ಸರಬರಾಜು, ಅರಣ್ಯ, ಕಂದಾಯ, ಅಕ್ಷರ ದಾಸೋಹ, ಶಿಶು ಅಭಿವೃದ್ಧಿ, ತೋಟಗಾರಿಕೆ, ಪಂಚಾಯತ ರಾಜ್, ಪಶು ವೈದ್ಯಕೀಯ ಮುಂತಾದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪರ ಮಾಹಿತಿ ನೀಡಿದರು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಿ.ವೈ.ಸಾವಂತ ಉಪಸ್ಥಿತರಿದ್ದು ಸಭೆಯನ್ನು ನಡೆಸಿಕೊಟ್ಟರು.