ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಹಿಂದುಳಿದ ವರ್ಗಗಳ ಅರಣ್ಯವಾಸಿಗಳ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ನಿರಂತರ ದೌರ್ಜನ್ಯ, ದಬ್ಬಾಳಿಕೆ ಜರಗುತ್ತಿದ್ದು ಸಾಮಾಜಿಕ ಕಲ್ಯಾಣದ ಯೋಜನೆ ಅಡಿಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಆಡಳಿತ ವ್ಯವಸ್ಥೆ ಮಂಜೂರಿ ಪ್ರಕ್ರೀಯೆ ಜರಗುತ್ತಿರುವುದರಿಂದ ಹಿಂದುಳಿದ ವರ್ಗಗಳ ಅರಣ್ಯವಾಸಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಕೋಡಬೆಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗವು ಶಾಶ್ವತ ಹಿಂದುಳಿದ ಆಯೋಗಕ್ಕೆ ಆಗ್ರಹಿಸಿತು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ, ಆಯೋಗದ ಸದಸ್ಯರಾದ ಬಿ. ಎಸ್ ರಾಜಶೇಖರ್, ಹೆಚ್.ಎಸ್ ಕಲ್ಯಾಣ ಕುಮಾರ, ಶಾರದಾ ನಾಯ್ಕ, ಅರುಣ ಕುಮಾರ, ಕೆ ತಿಮ್ಮಪ್ಪ ಸುವರ್ಣ ಅವರು ಜಿಲ್ಲಾಧಿಕಾರಿ ಮುಗಿಲ್ ಮಲೈ ಅವರಿಗೆ ಮನವಿ ಅರ್ಪಿಸಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ೯೭ ವಿವಿಧ ಹಿಂದುಳಿದ ಜಾತಿಗಳಿದ್ದು, ಅರಣ್ಯ ಹಕ್ಕು ಕಾಯಿದೆಯಲ್ಲಿ ಬಂದಿರುವAತಹ ಅರ್ಜಿಗಳಲ್ಲಿ ಹಿಂದುಳಿದ ವರ್ಗಗಳ ಅರ್ಜಿ ೬೩,೫೦೦ ಗಳಾಗಿದ್ದು ಅವುಗಳಲ್ಲಿ ಇಂದಿನವರೆಗೆ ಕೇವಲ ೨೫೨ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದ್ದು ಇರುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಯಿತು.
ದೌರ್ಜನ್ಯ ಮತ್ತು ಕಿರುಕುಳ:
ಆರ್ಥೀಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅರಣ್ಯ ಭೂಮಿಯ ಮೇಲೆ ವಾಸ್ತವ್ಯವು ಹಾಗೂ ಸಾಗುವಳಿಗಾಗಿ ಅವಲಂಭಿತವಾಗಿರುವ ಅತೀ ಹಿಂದುಳಿದ ವರ್ಗಗಳಾದ ಕುಣಬಿ, ಗೌಳಿ, ಮರಾಠಿ, ವಾಲ್ಮೀಕಿ ಮುಂತಾದ ಅರಣ್ಯವಾಸಿಗಳ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು ಕಾನೂನು ಬಾಹಿರವಾಗಿ ಪ್ರಕ್ರೀಯೆ ನಿರಂತರವಾಗಿ ಜರುಗುತ್ತಿದ್ದದ್ದು ಇರುತ್ತದೆ ಹಾಗೂ ಕಾನೂನು ಬಾಹಿರ ಕೃತ್ಯ, ಪೋಲೀಸ್ ಫೀರ್ಯಾದಿ ನೀಡಿದ್ದಲ್ಲಿ ಅರಣ್ಯವಾಸಿಗಳ ಫೀರ್ಯಾದಿಗೆ ಮಾನ್ಯತೆ ದೊರಕಿದ್ದು ಇರುವುದಿಲ್ಲ. ಅಲ್ಲದೇ, ಹಿಂದುಳಿದ ವರ್ಗಗಳ ಅರಣ್ಯವಾಸಿಗಳ ಮೇಲೆ ಕ್ರೀಮಿನಲ್ ಮೊಕದ್ದಮೆಯನ್ನು ದಾಖಲಿಸುತ್ತಿರುವುದು ವಿಷಾದಕರ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸೂಕ್ತ ಕ್ರಮಕ್ಕೆ ಆದೇಶ :
ಮನವಿ ಸ್ವೀಕರಿಸಿದ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಯ ಹಿತದೃಷ್ಠಿಯಲ್ಲಿ ಹಿಂದುಳಿದ ಅರಣ್ಯವಾಸಿಗಳ ಹಿತ ಕಾಪಾಡುವ ದಿಶೆಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ನಿಯೋಗಕ್ಕೆ ಬರವಸೆ ನೀಡಿದರು.