ಶಿರಸಿ: ಇತ್ತೀಚಿಗೆ ಶಿರಸಿ ಪಟ್ಟಣದಲ್ಲಿ ಗಾಂಜಾ ಮಾದಕ ಸೇವನೆಯಿಂದ ಯುವಕರು ಹಾಳಾಗುತ್ತಿದ್ದು ಈ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಮಾಡುವ ಆರೋಪಿತರ ಬಗ್ಗೆ ಹದ್ದಿನ ಕಣ್ಣಿಟ್ಟು ಮಾಹಿತಿ ಕಲೆ ಹಾಕಿದ್ದು,ಇಂದು ಬೆಳಿಗ್ಗೆ ಅಗಸೆಬಾಗಿಲು ಮೀನು ಮಾರುಕಟ್ಟೆಯ ಪಕ್ಕದಲ್ಲಿ ಅಲೆ ಸರ ಕಡೆಗೆ ಹಾದುಹೋಗುವ ಕಚ್ಚಾ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಪದಾರ್ಥವನ್ನು ಮಾರಾಟ ಮಾಡಲು ಬಂದ ಬಗ್ಗೆ ಖಚಿತ ಮಾಹಿತಿಯೊಂದಿಗೆ ಶಿರಸಿ ಪೊಲೀಸರು ದಾಳಿ ನಡೆಸಿ ಸಂತೋಷ್ (28) ಹಾಗೂ ಪರಶುರಾಮ (40) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವನೂರಿನ ಇಬ್ಬರನ್ನು ದಸ್ತಗಿರಿ ಮಾಡಿ ಆರೋಪಿತ ರಿಂದ ಬಜಾಜ್ ಕಂಪನಿಯ ಮೋಟಾರ್ ಸೈಕಲ್ , ಮಾರಾಟ ಮಾಡಲು ತಂದಿದ್ದ 9000 ರೂಪಾಯಿ ಮೌಲ್ಯದ 458 ಗ್ರಾಂ ತೂಕದ ಗಾಂಜಾ,1060 ರೂಪಾಯಿ ನಗದು ಹಣ ಹಾಗೂ ಎರಡು ಮೊಬೈಲ್ ಗಳನ್ನು ಜಪ್ತ್ ಮಾಡಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಆರೋಪಿಗಳು ಕಳೆದ ಹಲವು ವರ್ಷಗಳಿಂದ ಗಾಂಜಾ ಮಾರಾಟ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಡಿ.ಎಸ್. ಪಿ ರವಿ ನಾಯಕ್,ಸಿ. ಪಿ.ಐ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಶಿರಸಿಯ ಪಿ.ಎಸ್. ಐ ರಾಜ್ ಕುಮಾರ್ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಯ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.