ಕಾರವಾರ: ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವು ಹಿಜಾಬ್ ಎನ್ನುವ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದು, ಈಗಾಗಲೇ ಅಸ್ತಿತ್ವ ಹುಟ್ಟಿಸಿಕೊಳ್ಳುತ್ತಿರುವ ಎಸ್‍ಡಿಪಿಐ ಹಾಗೂ ಪೊಪ್ಯೂಲರ್ ಫ್ರಂಟ್ ಗೆ ಹಿಜಾಬ್ ಒಂದು ಅಸ್ತ್ರವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ಏಕತೆಯ ಸಂಕೇತ. ಶಿಕ್ಷಣ ಸಂಸ್ಥೆಗಳಲ್ಲಿ ಸಹೋದರತೆಯ ಭಾವನೆ ಮೂಡದೇ ಹಿಜಾಬ್‍ದಿಂದಾಗಿ ಪ್ರತ್ಯೇಕತೆ ಕಾಣುತ್ತಿದೆ. ಶಿಕ್ಷಣದಲ್ಲಿ ಸಾಂಪ್ರದಾಯಿಕತೆ ತರುವುದು ಸಲ್ಲದು. ನಾವೆಲ್ಲರೂ ಒಂದೇ ಎಂಬ ಭಾವನೆ ಹುಟ್ಟಿಸುವಂತದ್ದು ಶಾಲಾ ಮಟ್ಟದಲ್ಲಿ ಮುಖ್ಯವಾಗಿದ್ದು, ಶಿಕ್ಷಣದ ಧ್ಯೇಯವೂ ಇದೇ ಆಗಿದೆ. ಇದನ್ನು ಪಾಲಿಸುವುದು ಎಲ್ಲ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ಉಡುಪಿ ಕಾಲೇಜಿನ ವಿವಾದ ಇಂದು ರಾಜ್ಯಾದ್ಯಂತ ಹರಡುತ್ತಿದ್ದು, ಈ ಕೃತ್ಯದಲ್ಲಿ ಕಾಂಗ್ರೆಸ್ ಪಕ್ಷಗಳು ಮೇಲ್ನೋಟಕ್ಕೆ ಪ್ರವೇಶಿಸದಂತೆ ನಾಟಕವಾಡಿ ಹಿಂಬದಿಯಿಂದ ತಮ್ಮ ಕಾರ್ಯಕರ್ತರಿಗೆ ಪ್ರಚೋದನಾಕಾರಿ ಕರೆ ನೀಡುತ್ತಿದ್ದಾರೆ. ಉಡುಪಿ ಕಾಲೇಜಿನಲ್ಲಿ ಹಲವು ಮುಸ್ಲಿಂ ಹೆಣ್ಣು ಮಕ್ಕಳಿದ್ದಾರೆ. ಅವರೆಲ್ಲರೂ ಹಿಜಾಬ್ ಧರಿಸಿ ಬರುವುದಾಗಿ ಹೇಳಿಲ್ಲ. ಕೇವಲ 6 ಮಕ್ಕಳಿಂದ ಸಂಪೂರ್ಣ ರಾಜ್ಯಾದ್ಯಂತ ಬೆಂಕಿ ಹತ್ತಿದೆ. ಅಲ್ಲದೇ, ಬಾಗಲಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಮಂಜುನಾಥ ನಾಯ್ಕ ಮೇಲೆ ಮಾರಣಾಂತಿಕ ಹಲ್ಲೆಯೂ ನಡೆದಿದೆ. ಇಂಥ ದುರ್ಘಟನೆ ನಡೆಯದಂತೆ ಎಲ್ಲರೂ ಜಾಗೃತೆ ವಹಿಸಬೇಕಾಗಿದೆ ಎಂದು ತಿಳಿಸಿದರು.
ಹಿಂದೆ ಮುಸ್ಲಿಂ ಸಮುದಾಯದ ಮಹಿಳೆಯರು ಸೀರೆಯ ಸೆರಗನ್ನೇ ತಲೆಯ ಮೇಲೆ ಹಾಕಿಕೊಳ್ಳುತ್ತಿದ್ದರೇ ಹೊರತು ಯಾವ ಮಹಿಳೆಯೂ ಹಿಜಾಬ್ ಧರಿಸುತ್ತಿರಲಿಲ್ಲ. ಈ ಪದ್ಧತಿ ಕೆಲವು ವರ್ಷಗಳ ಹಿಂದೆಯಷ್ಟೇ ಪ್ರವೇಶಿಸಿದ್ದು, ಇಂದು ಶಾಲಾ-ಕಾಲೇಜುಗಳಲ್ಲೂ ಅವಾಂತರ ಸೃಷ್ಟಿಸುತ್ತಿದೆ. ಮುಸ್ಲಿಂ ಸಂಸ್ಕೃತಿಯ ಹಿಜಾಬ್ ಧಾರಣೆಗೆ ಯಾರೂ ಅಡ್ಡಿಪಡಿಸುತ್ತಿಲ್ಲ. ಆದರೆ ಶಾಲಾ-ಕಾಲೇಜುಗಳ ಸಮವಸ್ತ್ರದ ವಿಷಯದಲ್ಲಿ ನೀತಿ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಎಲ್ಲ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ಹಿಜಾಬ್ ಕುರಿತು ವಾದ-ವಿವಾದಗಳು ನಡೆಯುತ್ತಿದೆ. ಸರಕಾರ ಹಾಗೂ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ವಸ್ತ್ರ ಸಂಹಿತೆ ಪ್ರಕಾರ ಎಲ್ಲರೂ ಸಮವಸ್ತ್ರ ಧರಿಸುವುದು ಕಡ್ಡಾಯವಾಗಿದ್ದು, ಪಾಲಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಮೂಡಿಸುವ ಉದ್ದೇಶದಿಂದ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ:
ಉತ್ತರಕನ್ನಡ ಜಿಲ್ಲೆ ಶಾಂತಿ-ಸೌಹಾರ್ದತೆಯ ಜಿಲ್ಲೆ. ಇಲ್ಲಿ ಹಿಜಾಬ್ ಸೇರಿದಂತೆ ಯಾವುದೇ ಪ್ರಕರಣಗಳು ನಡೆಯಬಾರದು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯು ಸೂಕ್ತ ಕ್ರಮ ವಹಿಸಬೇಕಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಹಿಜಾಬ್ ವಿಷಯವಾಗಿ ಗಲಾಟೆ ಎಬ್ಬಿಸದಿರಲು ಕಾಂಗ್ರೆಸ್, ಎಸ್.ಡಿ.ಪಿ.ಐ, ಪಾಪ್ಯುಲರ್ ಫ್ರಂಟ್‍ಗೆ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಮನವಿ ಮಾಡಿದ್ದಾರೆ.