ಹೊನ್ನಾವರ : ಪುರಾಣದಲ್ಲಿ ವಿಷ್ಣುವಿನ ದಶಾವತಾರದಲ್ಲಿ ಸ್ಥಾನ ಪಡೆದ ಕೂರ್ಮ (ಆಮೆ) ಗಳ ಸರಣಿ ಸಾವುಗಳು ಕಡಲ ನಿವಾಸಿಗಳ ಆತಂಕಕ್ಕೆ ಕಾರಣವಾಗಿದ್ದು ಶೀಘ್ರ ತನಿಖೆಗೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ .
ಕಳೆದ ಒಂದು ತಿಂಗಳಿಂದ ಅಪ್ಸರಕೊಂಡ ಕಾಸರಕೊಡ್ ಕಡಲ ತೀರಗಳಲ್ಲಿ ಕಡಲಾಮೆಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪುತ್ತಿವೆ. ಕಡಲಾಮೆಗಳನ್ನು ಉದ್ದೇಶಪೂರ್ವಕವಾಗಿ ಸಾಗಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಜನವರಿ ತಿಂಗಳಿನಿಂದ ಇಲ್ಲಿಯವರೆಗೆ 5 ಕಡಲಾಮೆಗಳು ಮೃತಪಟ್ಟಿವೆ. ಸೋಮವಾರ ಸಾಯಂಕಾಲ ಇಕೋ ಬೀಚ್ ಕಡಲ ತೀರದಲ್ಲಿ ಬ್ರಹದಾಕಾರದ ಕಡಲಾಮೆ ಕಳೇಬರ ಪತ್ತೆಯಾಗಿತ್ತು, ಮಂಗಳವಾರ ಮುಂಜಾನೆ ಅಪ್ಸರಕೊಂಡ ಕಡಲ ತೀರದಲ್ಲಿ ಮತ್ತೊಂದು ಆಮೆ ಗಾಯಗೊಂಡು ಮೃತ ಪಟ್ಟಿರುವುದು ಪತ್ತೆಯಾಗಿದೆ.
ಒಂದೆಡೆ ಕಡಲಾಮೆಗಳ ಸರಣಿ ಸಾವು ಮೀನುಗಾರಿಕೆ ಅನುಮಾನ ಹಾಗೂ ಆತಂಕ ಸೃಷ್ಟಿಸಿದರೆ ಈ ಸಾವುಗಳು ಸಹಜವೋ ಅಥವಾ ಉದ್ದೇಶಪೂರ್ವಕವಾಗಿ ಆಮೆಗಳ ಮಾರಣ ಹೋಮ ನಡೆಸಲಾಗುತ್ತಿದೆಯೋ? ಎನ್ನುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕಡಲಾಮೆ ಮೊಟ್ಟೆ ಇಟ್ಟಾಗ ಮೀನುಗಾರರು ಅರಣ್ಯ ಇಲಾಖೆಯ ಸಹಕಾರದಿಂದ ಅದರ ರಕ್ಷಣೆ ಮಾಡುತ್ತಾ ಬಂದಿದ್ದರು. ಆದರೆ ಕಳೆದ ತಿಂಗಳಿಂದ ಮೊಟ್ಟೆ ಇಡಲು ಬಂದ ಆಮೆಗಳ ಸರಣಿ ಸಾವುಗಳ ಹಿಂದಿನ ಮರ್ಮದ ಬಗ್ಗೆ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸುತ್ತಿದ್ದಾರೆ.
ಜೀವ ಸಂಕುಲದಲ್ಲಿ ವಿನಾಶದ ಅಂಚಿನಲ್ಲಿರುವ ಜೀವಿಗಳಾದ ಆನೆ, ಚಿರತೆ, ಹುಲಿ ಸೇರಿದಂತೆ ಆಮೆಗಳ ರಕ್ಷಣೆಗೆ ಹಾಗೂ ಅವುಗಳ ನಾಶಕ್ಕೆ ಕಾರಣ ಆಗುವವರ ಮೇಲೆ ಕಠಿಣ ಶಿಕ್ಷೆಯ ಕ್ರಮದ ಕಾನೂನು ಜಾರಿಗೊಳಿಸಲಾಗಿದೆಯಾದರೂ ಕ್ರೂರವಾಗಿರುವ ಹಾವು, ಹುಲಿ, ಚಿರತೆಗೆ ಕೊಡುವ ಪ್ರಾಶಸ್ತ್ಯ ಯಾರಿಗೂ ತೊಂದರೆ ಕೊಡದೆ ಇರುವ ಆಮೆಗಳಿಗೆ ಸಿಗುತ್ತಿಲ್ಲ. ಕಚ್ಚುವ ಹಾವಿಗೆ, ದಾಳಿ ಮಾಡಿ ಪ್ರಾಣಕ್ಕೆ ಹಾನಿ ಮಾಡುವ ಹುಲಿಗೆ ದೇವಸ್ಥಾನ ಪೂಜೆ ನಡೆಯುತ್ತದೆ ಆದರೆ ಸಾಧು ಜೀವಿ ಆಮೆಗೆ ದೇವರ ಅವತಾರ ಎನ್ನುವುದನ್ನು ಬಿಟ್ಟರೆ ಅದರ ಅಳಿವು ಉಳಿವಿಗಾಗಿ ಹೆಚ್ಚಿನ ಮಹತ್ವ ಸಿಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಸ್ಥಳೀಯ ಮೀನುಗಾರರು:
ಈ ಸ್ಥಳ ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶ ಆಗಿದೆ. ಬಂಡವಾಳ ಶಾಹಿಗಳು ಇಲ್ಲಿ ಕಡಲಾಮೆ ಮೊಟ್ಟೆ ಇಡುವುದಿಲ್ಲ ಎಂದು ಸಾಕ್ಷಿಕರಿಸಲು ತೀರಕ್ಕೆ ಬರುವ ಕಡಲಾಮೆಗಳ ಹತ್ಯೆಗೆ ಮುಂದಾಗಿದ್ದಾರೆ. ರಾತ್ರಿವೇಳೆ ಟಾರ್ಚ್ ಬಿಟ್ಟು ಆಮೆಗಳು ಮೇಲೆ ಬಾರದಂತೆ ತಡೆಯುತ್ತಾರೆ. ಮೃತ ಆಮೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ತಲೆಗೆ ಪೆಟ್ಟು ಬಿದ್ದಿರುವುದು ಹಾಗೂ ಅದರಿಂದ ಮೃತ ಪಟ್ಟಿರುವುದು ಗಮನಕ್ಕೆ ಬರುತ್ತದೆ. ಅರಣ್ಯ ಇಲಾಖೆ ಕಡಲಾಮೆಗಳ ರಕ್ಷಣೆಯ ಜೊತೆಯಲ್ಲಿ ಆಮೆಗಳ ಸಾವಿಗೆ ಕಾರಣ ಆದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.