ಸಿದ್ದಾಪುರ: ಮಕ್ಕಳಾಗದ ದಂಪತಿಗೆ ಸಂತಾನಭಾಗ್ಯ ನೀಡುವ ಎಂಟು ನೂರು ವರ್ಷಗಳ ಹಿಂದೆ ಬಿಳಗಿಯ ಅರಸರ ಕಾಲದಲ್ಲಿ ಸ್ಥಾಪನೆಗೊಂಡಿದ್ದ ಗಂಗಾ ಕಲ್ಲೇಶ್ವರ ದೇವಸ್ಥಾನಕ್ಕೆ ಈಗ ಹೊಸ ಕಳೆ ಬಂದಿದೆ.
ಸಿದ್ದಾಪುರ ತಾಲೂಕಿನ ಬೊಗ್ರಿಮಕ್ಕಿ (ಶೀರಳ್ಳಿ)ಯ ಗಂಗಾ ಕಲ್ಲೇಶ್ವರ ದೇವಸ್ಥಾನ ಈಗ ಅಭಿವೃದ್ಧಿಯತ್ತ ಸಾಗುತ್ತಿದೆ. ಶತರುದ್ರಾಭೀಷೇಕ, ಹವನಗಳು ನಿಯಮಿತವಾಗಿ ಹರಕೆಯ ಸಲ್ಲಿಕೆ ಆಗುತ್ತಿದೆ. ನಿತ್ಯ ಪೂಜೆ, ಪ್ರತಿ ಸೋಮವಾರ ವಿಶೇಷ ಪೂಜೆಗಳ ಜತೆಗೆ ಅನೇಕ ಧಾರ್ಮಿಕ ಕಾರ್ಯಗಳು ನಡೆಯುವುದರೊಂದಿಗೆ ಶ್ರದ್ಧಾ ಚಟುವಟಿಕೆಗಳ ಕೇಂದ್ರವಾಗಿದೆ.
ಲಾಕ್ ಡೌನ್ ಕೊಟ್ಟ ದೇವರ ಸೇವೆ:
ದೇವಸ್ಥಾನದ ಅಭಿವೃದ್ಧಿ ಮಾಡಬೇಕು ಎಂದು ಸುತ್ತಲಿನ ಹತ್ತು ಹಳ್ಳಿಗಳ ಕನಸಿಗೆ 2019ರಲ್ಲಿ ಕಾಣಿಸಿಕೊಂಡ ಕರೊನಾ ಸಾಂಕ್ರಮಿಕ ರೋಗದ ಲಾಕ್ ಡೌನ್ ಊರಿನ ಜನತೆಗೆ ಹಾಗೂ ಭಕ್ತರಿಗೆ ದೇವರ ಸೇವೆಗೆ ತೊಡಗಿಸಿಕೊಳ್ಳಲು ಪ್ರೇರಣೆ ಆಯಿತು.
ದೇವಸ್ಥಾನ ನಿರ್ಮಾಣಕ್ಕೆ ಸ್ಥಳೀಯ ಯುವಕ ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ ನೀಲನಕ್ಷೆ ಸಿದ್ದಪಡಿಸಿದ್ದರು. ಮಹಾಬಲೇಶ್ವರ ಕೃಷ್ಣ ಹೆಗಡೆ ಓಜಗಾರ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡ ದೇವಸ್ಥಾನ ಅಭಿವೃದ್ಧಿ ಕಾರ್ಯ ಸ್ಥಳೀಯರು ದಾವಣಗೆರೆಯಲ್ಲಿ ಉದ್ಯೋಗಿ ಆಗಿರುವ ಅನಂತ ಗೋಪಾಲ ಹೆಗಡೆ ಅವರ ಮುಂದಾಳತ್ವದಲ್ಲಿ ಬೊಗ್ರಿಮಕ್ಕಿ, ಓಜಗಾರು, ಸೋವಿನಕೊಪ್ಪ, ಗೊರವಿಕೈ, ಒಡ್ನಿಕೊಪ್ಪ, ಮೂಲೆಪಾಲು,ತೋಟದಮಕ್ಕಿ ಸುತ್ತಮುತ್ತಲಿನ ಜನರು ಕೊರಕಲು ಬಿದ್ದ ಗುಂಡಿ ತುಂಬಿದರು. ದೇವಸ್ಥಾನದ ಪಾಯ ತೋಡಿದರು. ಸಿಮೆಂಟ್ ಕಲಸಿದರು. ಮಣ್ಣು ಹೊತ್ತರು, ತಮ್ಮಿಂದ ಏನೆಲ್ಲ ಸಾಧ್ಯವೋ ಅಷ್ಟೂ ಕೆಲಸವನ್ನು ಅಂದಾಜು 5ಲಕ್ಷರೂಗಳಿಗೂ ಅಧಿಕ ಶ್ರಮದಾನ ಮಾಡಿ ಅಂದಿನ ಹಳೆ ದೇವಸ್ಥಾನ ಹೊಸ ಕಟ್ಟಡದೊಂದಿಗೆ ರೂಪಗೊಂಡಿತು.
ಬೊಗ್ರಿಮಕ್ಕಿಯಲ್ಲಿ ಪ್ರತೀ ವರ್ಷ ಗಂಗಾಷ್ಟಮಿಗೆ ನೈಸರ್ಗಿಕವಾಗಿ ಗಂಗಾಜಲ ಉದ್ಭವವಾಗುತ್ತದೆ. ಇದು ಪ್ರಕೃತಿ ಅಚ್ಚರಿಗೆ ಕಾರಣವಾಗುತ್ತಿದೆ.ಗಂಗೋದ್ಭವದ ಸಮೀಪವೇ ಇರುವ ಪುರಾತನ ಗಂಗಾ ಕಲ್ಲೇಶ್ವರ ದೇವರಿಗೆ ಜೀರ್ಣಾವಸ್ಥೆಯ ಗುಡಿಯೊಂದಿತ್ತು. ಈ ವರ್ಷದಿಂದ ಗಂಗಾಷ್ಠಮಿಗೆ ಉಂಟಾಗುವ ಗಂಗೋದ್ಭವದ ನೀರು ನೇರ ಶಿವನ ಶಿರದ ಮೇಲೆ ಬಂದು ಬೀಳುತ್ತಿದೆ. ಸುಮಾರು 500ಮೀಟರ್ ಉದ್ದದ ಪೈಪ್ ಅಳವಡಿಸಿ ಶಿವನ ತಲೆಗೆ ಗಂಗಾಷ್ಠಮಿಯಿಂದ ಸಂಪೆ ಷಷ್ಟಿ ತನಕ ಈ ಪುಣ್ಯ ಜಲದ ಅಭಿಷೇಕ ಆಗಲಿದೆ. ಉಳಿದ ದಿನಗಳ ಜಲದ ಬಳಕೆಗೆ ಬಾವಿ ಕೂಡ ತೋಡಲಾಗಿದೆ.
ಗ್ರಾಮಸ್ಥರ, ಭಕ್ತಾದಿಗಳ ಶ್ರಮದಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಇನ್ನೂ 50ಲಕ್ಷರೂಗಳಿಗೂ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ನೂತನ ದೇವಸ್ಥಾನಕ್ಕೆ 20ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ರಸ್ತೆ, ಸಭಾಭವನ, ಚಂದ್ರಶಾಲೆ,ದೇಗುಲದ ಎದುರಿನ ಪಿಚ್ಚಿಂಗ್ ಸೇರಿ ಅನೇಕ ಅಭಿವೃದ್ಧಿ ಕಾರ್ಯ ಆಗಬೇಕಿದೆ. ದೇವಾಲಯದಲ್ಲಿ ಭಿನ್ನವಾದ ಹಳೆ ಈಶ್ವರ ಮೂರ್ತಿ ಬದಲಿಗೆ ನೂತನ ಮೂರ್ತಿಯ ಪ್ರತಿಷ್ಠೆ ಕಳೆದ ಮೇನಲ್ಲಿ ಮಾಡಲಾಗಿದೆ.ಮಹಾಗಣಪತಿ, ದೇವಿ, ನಾಗರ,ವಿಗ್ರಹಗಳೂ ಇದೆ.
ಗಣಪತಿ ಮಹಾಬಲೇಶ್ವರ ಹೆಗಡೆ ಬೊಗ್ರಿಮಕ್ಕಿ ದೇವಸ್ಥಾನದ ಯಜಮಾನರಾಗಿ, ರಾಮಚಂದ್ರ ಹೆಗಡೆ ಓಜಗಾರು ಅಧ್ಯಕ್ಷರಾಗಿ, ರಾಜು ಹೆಗಡೆ ಬೊಗ್ರಿಮಕ್ಕಿ ಕಾರ್ಯದರ್ಶಿಯಾಗಿ ಹಾಗೂ 9ಜನರ ಆಡಳಿತ ಮಂಡಳಿ ಸುತ್ತಲಿನ ಜನತೆಯ ಹಾಗೂ ಭಕ್ತರ ಸಹಕಾರದೊಂದೊಗೆ ದೇವಸ್ಥಾನದ ಅಭಿವೃದ್ಧಿಗೆ ಮುಂದಾಗಿದ್ದಾರೆ.ರವೀಂದ್ರ ಹೆಗಡೆ ಓಜಗಾರ ಹಾಗೂ ವಿನಾಯಕ ಬೊಗ್ರಿಮಕ್ಕಿ ಇವರು ಅರ್ಚಕರಾಗಿದ್ದಾರೆ.
ಅಭಿವೃದ್ಧಿಯ ಕಾರ್ಯಕ್ಕೆ ಇನ್ನಷ್ಟು ಹೆಗಲು ನೀಡುವ ಕಾರ್ಯ ಆಗಬೇಕಿದೆ. ನಿರಂತರ ಸಾಂಸ್ಕøತಿಕ, ಧಾರ್ಮಿಕ ಚಟುವಟಿಕೆ ಕೇಂದ್ರವಾಗಿ ಬೆಳೆಸಲು ಹಾಗೂ ಉಪನಯನ, ಮದುವೆ ಮತ್ತಿತರ ಕಾರ್ಯ ನಡೆಸಲು ಚಿಂತನೆ ನಡೆಸಲಾಗಿದೆ.ಭಕ್ತರು ಹಾಗೂ ದಾನಿಗಳು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೆ ಸಹಕರಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಚಂದ್ರ ಹೆಗಡೆ ಓಜಗಾರು ಹಾಗೂ ಕಾರ್ಯದರ್ಶಿ ರಾಜು ಹೆಗಡೆ ಬೊಗ್ರಿಮಕ್ಕಿ ಹೇಳುತ್ತಾರೆ.
ಮಾರ್ಚ 24 ರಂದು ದೇವಸ್ಥಾನದ ವಾರ್ಷಿಕ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.