ಸಿದ್ದಾಪುರ: ಪಟ್ಟಣ ಪಂಚಾಯತದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ರಸ್ತೆ ಬದಿಯಲ್ಲಿ ನೂರಾರು ಅಂಗಡಿ ಹಾಕುತ್ತಿದ್ದರೂ ಪಟ್ಟಣ ಪಂಚಾಯತ ವತಿಯಿಂದ ಬಾಡಿಗೆ ಸರಿಯಾಗಿ ವಸೂಲಿ ಮಾಡುತ್ತಿಲ್ಲ ಎಂದು ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು. ಪ. ಪಂ. ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಮಾರುತಿ ನಾಯ್ಕ ವಿಷಯ ಪ್ರಸ್ತಾಪಿಸಿ, ಪ್ರತಿ ಬುಧವಾರ ೪೦೦ಕ್ಕೂ ಅಧಿಕ ಅಂಗಡಿ ಹಾಕಲಾಗುತ್ತದೆ. ವಸೂಲಾತಿಯಲ್ಲಿ ವ್ಯತ್ಯಾಸ ಕಾಣುತ್ತಿದೆ. ಅಂಗಡಿಗಳಿಂದ ಪಟ್ಟಣ ಪಂಚಾಯ್ತಿ ಬಾಡಿಗೆ ಸರಿಯಾಗಿ ವಸೂಲಿ ಮಾಡುತ್ತಿಲ್ಲ. ಇದರಿಂದ ಸ್ಥಳೀಯ ಸಂಸ್ಥೆಗೆ ಆರ್ಥಿಕ ನಷ್ಟವಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಕುಮಾರ ನಾಯ್ಕ ಪ್ರತಿಕ್ರಿಯಿಸಿ, ಪಟ್ಟಣದಲ್ಲಿರುವ ತಳ್ಳು ಗಾಡಿಗೆ ಹಾಗೂ ಪಾಸ್ಟ್ ಕೇಂದ್ರಕ್ಕೆ ೩೦ ರು. ನಂತೆ ವಸೂಲಿ ಮಾಡಲಾಗುತ್ತಿದೆ. ಫುಟ್‌ಪಾತ್ ವ್ಯಾಪಾರಿಗಳಿಗೆ ಅವಕಾಶ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಅಂಗಡಿಗಳಿಂದ ಸರಿಯಾಗಿ ಬಾಡಿಗೆ ವಸೂಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣ ಪಂಚಾಯ್ತಿಗೆ ಬರುವ ಆದಾಯದಲ್ಲಿ ಹಿಂದಿನ ಸಾಲಿಗಿಂತ ಕಡಿಮೆ ತೋರಿಸಲಾಗಿದೆ. ನೀರಿನ ಕರ 54 ಲಕ್ಷ ಗುರಿ ಇದದ್ದು, ಈ ಬಾರಿ 33 ಲಕ್ಷ ತೋರಿಸಲಾಗಿದೆ. ಕರ ವಸೂಲಾತಿಯಲ್ಲಿ ಪ್ರಗತಿ ಕಾಣುತ್ತಿಲ್ಲ. ತಳ್ಳು ಗಾಡಿಯನ್ನು ತಮ್ಮ ವ್ಯಾಪಾರದ ನಂತರ ಅವರವರ ಜಾಗಕ್ಕೆ ಕೊಂಡೊಯ್ಯಬೇಕು. ರಸ್ತೆ ಮೇಲೆ ನಿಲ್ಲಿಸುವುದಕ್ಕೆ ಕಡಿವಾಣ ಹಾಕಿ ಎಂದು ಸದಸ್ಯ ಕೆ. ಜಿ. ನಾಯ್ಕ ತಿಳಿಸಿದರು. ಪ್ರಸಕ್ತ ಸಾಲಿನ ಕರ ವಸೂಲಿ 70% ಆಗಿದ್ದು, 30% ವಸೂಲಿಯಾಗಬೇಕಿದೆ. ಕುಡಿಯುವ ನೀರು ಒಟ್ಟು ೪೮ ಲಕ್ಷವಿದ್ದು, 23 ಲಕ್ಷ ಮಾತ್ರ ವಸೂಲಾಗಿದೆ. ಹಳೆಬಾಕಿ 15 ಲಕ್ಷವಿದ್ದು ಇನ್ನು ೫ ಲಕ್ಷ ವಸೂಲಾಗಬೇಕಿದೆ ಎಂದು ಮುಖ್ಯಾಧಿಕಾರಿ ಕುಮಾರ ನಾಯ್ಕ ಸ್ಪಷ್ಟನೆ ನೀಡಿದರು.
ತಾಲೂಕಿನ ಕನ್ನಳ್ಳಿ ಭಾಗದಲ್ಲಿ ಬೀದಿ ದೀಪ ಹಾಗೂ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಸ್ಪಂದಿಸುತ್ತಿಲ್ಲ. ಜನರಿಗೆ ಉತ್ತರ ನೀಡಿ ಸಾಕಾಗಿದೆ ಎಂದು ಸದಸ್ಯ ನಂದನ ಬೋರಕರ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಪಂ ಉಪಾಧ್ಯಕ್ಷ ರವಿಕುಮಾರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ ಉಪಸ್ಥಿತರಿದ್ದರು.