ಕಾರವಾರ: ತಾಲೂಕಿನ ಕಣಸಗಿರಿಯಲ್ಲಿ ದರ್ಗಾ ಹೆಸರಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿ ನಮ್ಮ ಜಮೀನನ್ನು ಕಬಳಿಸಲು ಮುಂದಾಗಿದ್ದು ಜಮೀನನ್ನು ಭೂಗಳ್ಳರಿಂದ ಮುಕ್ತಗೊಳಿಸಬೇಕು ಎಂದು ಆರೋಪಿಸಿ ಕಣಸಗಿರಿ ಗ್ರಾಮದ ಪ್ರಭಾಕರ ರಾಣೆ, ರಾಮದಾಸ್ ರಾಣೆ, ಆನಂದು ರಾಣೆ, ವಿಜಯಾ ರಾಣೆ ಹಾಗೂ ಸಚಿನ್ ರಾಣೆ ಎಂಬುವವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕಣಸಗಿರಿ ಗ್ರಾಮದ ಸರ್ವೇ ನಂ. 19 ಹಿಸ್ಸಾ 11 ಇದರ ಜಂಟಿ ಮಾಲೀಕರಾಗಿದ್ದು, ಈ ಭೂಮಿಯು ಕೃಷಿ ಭೂಮಿಯಾಗಿರುತ್ತದೆ. ಪೂರ್ವಜರು ಹಲವು ದಶಕಗಳಿಂದ ಈ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಕೆಲವು ವರ್ಷಗಳಿಂದ ಉಪ್ಪು ನೀರಿನ ಹರಿವು ಇರುವುದರಿಂದ ಜಮೀನಿನಲ್ಲಿ ಭತ್ತ ಬೆಳೆಯಲು ಸಾಧ್ಯವಾಗದೆ ಗಿಡಗಳನ್ನು ನೆಟ್ಟಿದ್ದೇವೆ. ಭೂಮಿಯಲ್ಲಿ ಒಂದು “ಗಡಿ ದೇವರ ದೇವಾಲಯವು ಇದೆ. ಆದರೆ ಕಳೆದ 5-6 ವರ್ಷಗಳಿಂದ ಚಿತ್ತಾಕುಲ ಮತ್ತಿತರ ಗ್ರಾಮಗಳಿಂದ ಕೆಲವು ಮುಸ್ಲಿಮರು ಬಂದು ದರ್ಗಾ ಎಂದು ಹೇಳಿಕೊಂಡು ನಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ನಮ್ಮ ಭೂಮಿ ನದಿಯ ಅಂಚಿನಲ್ಲಿದೆ. ಆ ಕಾರಣಕ್ಕಾಗಿ ದರ್ಗಾ ಅಂತ ಹೇಳಿ ಯಾವುದೋ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿ, ಅವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸಲು ನಮ್ಮ ಭೂಮಿಯನ್ನು ಕಬಳಿಸಲು ಹೊರಟಿದ್ದಾರೆ.
ಕೆಲವರು ನಮ್ಮ ಜಮೀನನ್ನು ಕಬಳಿಸಿ ತಮ್ಮ ಅಕ್ರಮ ಹಾಗೂ ದುಷ್ಕೃತ್ಯಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ದರ್ಗಾ ಮಾಡಿದಂತಿದೆ. ಕೆಲ ದಿನಗಳ ಹಿಂದೆ, ಈ ಅಕ್ರಮ ಕಟ್ಟಡದ ಒಂದು ಭಾಗಕ್ಕೆ ಯಾರೋ ಹಾನಿ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದ್ದು, ಎರಡು ದಿನಗಳ ಹಿಂದೆ ಕೆಲವು ಕೂಲಿಕಾರರು ಜಮೀನಿನಲ್ಲಿ ಕಟ್ಟಡ ಕಾಮಗಾರಿ ನಡೆಸಿದ್ದಾರೆ. ಪೊಲೀಸರು ಜಮೀನಿನಲ್ಲಿ ನಿಂತಿದ್ದರೂ ಅಕ್ರಮ ನಿರ್ಮಾಣ ಮಾಡುವುದನ್ನು ತಡೆಯಲಿಲ್ಲ. ಈ ಜಮೀನು ಖಾಸಗಿ ಜಮೀನು ಆಗಿರುವುದರಿಂದ ಕಟ್ಟಡ ನಿರ್ಮಾಣ ಮಾಡಲು ನಾವು ಯಾವುದೇ ಅನುಮತಿ ನೀಡಿಲ್ಲ ಅಥವಾ ಪಂಚಾಯಿತಿಯಿಂದ ಕೂಡ ಯಾವುದೇ ಅನುಮತಿಯನ್ನು ಪಡೆದಿಲ್ಲ ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಭೂಗಳ್ಳರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಧಾರ್ಮಿಕ ಕಟ್ಟಡದ ನೆಪದಲ್ಲಿ ನಡೆದಿರುವ ಅಕ್ರಮ ನಿರ್ಮಾಣವನ್ನು ನಮ್ಮ ಜಮೀನಿನಿಂದ ತೆಗೆದು ಹಾಕಿ ಭೂಗಳ್ಳರಿಂದ ಮುಕ್ತಗೊಳಿಸಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ.