ಕಾರವಾರ: ಹೆಣ್ಣು ಮಕ್ಕಳು ಸ್ವ-ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಆತ್ಮಸ್ಥೈರ್ಯದಿಂದ ಮುನ್ನುಗ್ಗಿ, ಸ್ವಾಭಿಮಾನಿಯಾಗಿ ಬದುಕಿ, ಮುಂದಿನ ಪೀಳಿಗೆಗೆ ಆದರ್ಶ ವ್ಯಕ್ತಿಯಾಗಿ ರೂಪಗೊಳ್ಳಲು ಓಬವ್ವ ಆತ್ಮರಕ್ಷಣೆ ಕಲೆ ಸಹಕಾರಿಯಾಗಲಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವ್ಯಾಪ್ತಿಯ ವಸತಿ ಶಾಲೆಗಳು ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ರವೀಂದ್ರನಾಥ ಠಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಮೆಟ್ರಿಕ್ ನಂತರದ ವಿವಿಧ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಎಲ್ಲ ಸಮಯದಲ್ಲೂ ಯಾರನ್ನೂ ನೆಚ್ಚದೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೆಣ್ಣುಮಕ್ಕಳು ಕರಾಟೆ ಕಲಿಯಬೇಕಿದೆ. 18 ನೇ ಶತಮಾನದ ಓಬವ್ವನಂತೆ ನಮ್ಮ ಹೆಣ್ಣು ಮಕ್ಕಳು ಕೂಡ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲಿ ಹಾಗೂ ಕಲಿತ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಲಿ. ತನ್ನ ಮುಂದಿನ ಪೀಳಿಗೆಗೆ ಈ ಕಲೆಯನ್ನು ತಿಳಿಸುವ ಮೂಲಕ ಅವರಿಗೂ ಆತ್ಮರಕ್ಷಣೆಯ ಕಲೆ ಕಲಿಸಿಕೊಡಲಿ ಎಂಬ ಸದಾಶಯದಿಂದ ಕರ್ನಾಟಕ ಸರಕಾರ ಈ ಓಬವ್ವ ಆತ್ಮರಕ್ಷಣಾಕಲೆ ತರಬೇತಿ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದರು.
ರಾಜ್ಯದ 1704 ವಿವಿಧ ವಸತಿ ಶಾಲೆಗಳ 1,82,000 ವಿದ್ಯಾರ್ಥಿನಿಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಒನಕೆ ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ನೀಡಲಾಗುತ್ತಿದೆ. ಪ್ರತಿ ಮನೆಯಲ್ಲೂ ಒಬವ್ವ ಹುಟ್ಟಿ ಬರಲಿ ಎಂಬ ಆಶಯದೊಂದಿಗೆ ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಕಲಿಸುತ್ತಿರುವ ಯೋಜನೆ ಇದಾಗಿದೆ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಹೆಣ್ಣು ಮಕ್ಕಳು ಸ್ವಯಂ ರಕ್ಷಣೆಗಷ್ಟೆ ಸೀಮಿತವಾಗಿ ಕರಾಟೆ ಕಲೆಯನ್ನು ಕಲಿಯದೇ, ಸ್ವ ಗೌರವದ ಜೊತೆಗೆ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಅವಕಾಶಗಳ ರಕ್ಷಣೆಗೆ ಮತ್ತು ಅವಕಾಶಗಳನ್ನು ತಡೆಯೊಡ್ಡುವ ಶತ್ರುಗಳ ನಿವಾರಣೆಗೆ ಆತ್ಮ ರಕ್ಷಣೆ ಕಲೆ ಕಲಿಯಬೇಕಾಗಿದೆ. ಇದು ದಾರಿ ತೋರಿಸುವ ಕಲೆಯಾಗಿದ್ದು, ಈ ಅವಕಾಶಗಳನ್ನು ಬಳಿಸಿಕೊಳ್ಳಬೇಕು. ಓಬವ್ವನಿಗೆ ಕೋಟೆ ಕಾಪಾಡಲು ಒನಕೆ ಬೇಕಾಗಿತ್ತು. ನಿಮಗೆ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಹಾಗೂ ಜೀವನದಲ್ಲಿ ಆತ್ಮ ವಿಶ್ವಾಸದಿಂದ ಸಾಗಲು ನಿಮ್ಮ ಕೈಕಾಲುಗಳು ಹಾಗೂ ಸಾಮಾನ್ಯ ಜ್ಞಾನ ಸಾಕು. ಕರಾಟೆ ಕಲೆ ಕರಗತಗೊಳಿಸಿಕೊಂಡು ನಿಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೂ ರಕ್ಷಣೆ ನೀಡುವಂತಹ ಕಾರ್ಯ ನಿಮ್ಮಿಂದಾಗಲಿ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭಾ ಅಧ್ಯಕ್ಷ ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ ಸೇರಿದಂತೆ ಇತರರು ಇದ್ದರು.