ಕಾರವಾರ: ಗ್ರಾಮಗಳಲ್ಲೇ ನೂರಕ್ಕೆ ನೂರರಷ್ಟು ಸೇವೆಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಗ್ರಾಮ ಒನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯು ಗ್ರಾಮ ಒನ್ ಯೋಜನೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಗ್ರಾಮ ಒನ್ ಯೋಜನೆ ಅನುಷ್ಠಾನಗೊಳಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾತನಾಡಿದ ಅವರು, ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುವದರಿಂದ ಅಲ್ಲಿ ಇಂಟರ್‍ನೆಟ್ ಸಂಪರ್ಕ ಇರುವುದು ಮುಖ್ಯವಾಗಿದೆ. ಈ ಕುರಿತು ಟೆಲಿಕಾಮ್ ಕಂಪನಿಗಳೊಂದಿಗೆ ಸಭೆ ನಡೆಸಿ, ಸಮನ್ವಯದೊಂದಿಗೆ ಉತ್ತಮ ಸೇವೆ ನೀಡುವ ಕಾರ್ಯವಾಗಬೇಕು. ಜನರಿಗೆ ಸಮಸ್ಯೆಯಾಗದಂತೆ ಅತ್ಯಲ್ಪ ಸೇವಾ ಶುಲ್ಕ ಹಾಗೂ ಪ್ರಾಂಚೈಸ್‍ಗಳಿಗೂ ಅನುಕೂಲವಾಗುವಂತೆ ಗಾಮ ಒನ್ ಕೇಂದ್ರಗಳ ಬಗ್ಗೆ ನಿಗಾವಹಿಸಿ ಆ ಕೇಂದ್ರಗಳು ರಚನಾತ್ಮಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಮದ್ಯವರ್ತಿಗಳ ಹಾವಳಿ ತಪ್ಪಿಸಬೇಕಾಗಿರುವುದರಿಂದ ಯಾವ ಯಾವ ಇಲಾಖೆಯಲ್ಲಿ ಯಾವ ರೀತಿಯ ಸೇವೆಗಳನ್ನು ಗ್ರಾಮ ಒನ್ ಯೋಜನೆಯಲ್ಲಿ ಸೇರಿಸಬಹುದಾಗಿದೆ ಎಂದು ಪಟ್ಟಿ ಮಾಡಿ ಅಂತಹ ಸೇವೆಗಳಿಗೆ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಕೊಡುವಂತಹ ವ್ಯವಸ್ಥೆ ಆಗಬೇಕು. ಜಿಲ್ಲೆಯ ಮೀನುಗಾರರು ಸೀಮೆಎಣ್ಣೆ ಸಬ್ಸಿಡಿಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಕೂಡ ಗ್ರಾಮ್ ಒನ್ ಮೂಲಕವೇ ಆಗುವಂತಹ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ವಿವಿಧ ಸಂಸ್ಥೆಯ ಪಾಲುದಾರರೊಂದಿಗೆ ಆನ್‍ಲೈನ್ ಮೂಲಕ ಗ್ರಾಮ ಒನ್ ಫ್ರಾಂಚೈಸ್ ನೋಂದಣಿಯನ್ನು ಜ. 20 ರಿಂದ ಫೆ. 2 ರವರೆಗೆ 3 ಹಂತದಲ್ಲಿ ತೆರೆಯಲಾಗಿದ್ದು, ಮೊದಲ ಹಂತದಲ್ಲಿ ಆಯ್ಕೆಗೊಂಡ 163 ಗ್ರಾಮ ಪಂಚಾಯತಿಯ 322 ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ, ಫೆ. 2ರಂದು ಜಿಲ್ಲಾ ಮಟ್ಟದ ಕಾರ್ಯಪಡೆಗೆ ಸೂಕ್ತ ಪರಿಶೀಲನೆಗೆ ನೀಡಲಾಗಿದೆ ಹಾಗೂ ತಹಶೀಲ್ದಾರ ನೇತೃತ್ವದ ತಾಲೂಕು ಮಟ್ಟದ ಕಾರ್ಯಪಡೆಗೆ ಸ್ಥಳ ಪರಿಶೀಲನೆಗಾಗಿ ನೀಡಲಾಗಿದೆ.
ದ್ವಿತೀಯ ಹಂತದಲ್ಲಿ ಆಯ್ಕೆಗೊಂಡ 68 ಗ್ರಾಮ ಪಂಚಾಯತಿಯ 151 ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ, ಫೆ. 3ರಂದು ಜಿಲ್ಲಾ ಮಟ್ಟದ ಕಾರ್ಯಪಡೆಗೆ ಸೂಕ್ತ ಪರಿಶೀಲನೆಗೆ ನೀಡಲಾಗಿದೆ. ಒಟ್ಟೂ ಗ್ರಾಮ ಪಂಚಾಯತಗಳು 231, ಗ್ರಾಮ-ಒನ್ ಕೇಂದ್ರಗಳು 270, ಅರ್ಹತೆ ಪಡೆದ ಅರ್ಜಿಗಳು 354, ಸ್ವೀಕೃತಗೊಂಡ ಅರ್ಜಿಗಳು 473, ತಿರಸ್ಕøತ ಅರ್ಜಿಗಳು 118, ಮಾನದಂಡದಂತೆ ಅರ್ಹತೆ ಪಡೆದ ಅರ್ಜಿಗಳು 241, ತಿರಸ್ಕøತ ಅರ್ಜಿಗಳು 232 ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಕಾರವಾರ ನಗರಸಭಾ ಅಧ್ಯಕ್ಷ ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೆಕರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.