ಹೊನ್ನಾವರ : ಶಿಕ್ಷಕರು ಮಾನಸಿಕವಾಗಿ ನೆಮ್ಮದಿಯಿಂದ ಇದ್ದಾಗ ಸರಿಯಾಗಿ ಪಾಠ ಮಾಡಲು ಸಾಧ್ಯ. ಸರ್ಕಾರ ಅವರ ಸಮಸ್ಯೆಯನ್ನು ಬಗೆಹರಿಸುವತ್ತ ಚಿಂತಿಸಬೇಕಿದೆ. ಆದರೆ ಸರ್ಕಾರದ ಸಚೀವರು ಕೋಲೆ ಬಸವಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಕೇವಲ ಆಶ್ವಾಸನೆಗೆ ಸಿಮೀತವಾಗಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಹಾಯಕತೆ ತೋರಿದರು.
ಪಟ್ಟಣದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನಲ್ಲಿ ಸೋಮವಾರದಂದು ನಡೆದ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕ ನೌಕರ ಸಮುದಾಯದೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲದೆ ಸಚೀವನಾಗಿದ್ದಾಗ ಶಿಕ್ಷಕರ ನೇಮಕ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ತಾಲೂಕಿನ ಶಿಕ್ಷಕರು ನೀಡಿರುವ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ಕಾಲ್ಪನಿಕ ವೇತನ, ಅತಿಥಿ ಶಿಕ್ಷಕರಿಗೆ ನೀಡುವ ವೇತನವನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸುವುದು, ಹಳೆಯ ಪಿಂಚಣಿ ವ್ಯವಸ್ಥೆ ಜಾರಿ, ಕಾಲೇಜುಗಳಲ್ಲಿ ಪ್ರಾಚಾರ್ಯರ ಹುದ್ದೆ ಭರ್ತಿಗೆ ಅನುಮೋದನೆ ದೊರಕಿಸಿಕೊಡವುದು ಸೇರಿದಂತೆ ಶಿಕ್ಷಕರ ನಾನಾ ಬೇಡಿಕೆಗಳನ್ನು ಈಡೇರಿಸುವ ಕುರಿತು ಶಿಕ್ಷಕರ ಸಂಘದ ಪದಾಧಿಕಾರಿಗಳು ಬಸವರಾಜ ಹೊರಟ್ಟಿಯವರ ಗಮನ ಸೆಳೆದರು.
ಎಸ್.ಡಿ.ಎಂ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಬಸವರಾಜ ಹೊರಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕಕರ ಸಂಘದ ಎಲ್.ಎಂ. ಹೆಗಡೆ, ಪ್ರಭಾಕರ ಬಂಟ್, ಎಂ.ಟಿ. ಗೌಡ, ಆರ್.ಟಿ. ನಾಯ್ಕ, ಎಂ.ಜಿ. ಹೆಗಡೆ, ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ, ನಿವೃತ್ತ ಪ್ರಾಚಾರ್ಯ ಎಸ್.ಜಿ. ಭಟ್, ನಿವೃತ್ತ ಶಿಕ್ಷಕ ಅರ್.ಟಿ. ಹೆಬ್ಬಾರ ಶಿಕ್ಷಕರ ಸಮಸ್ಯೆ ಹಾಗೂ ಪರಿಷತ್ ಸದಸ್ಯರಾಗಿ ಮಾಡಿದ ಕಾರ್ಯವನ್ನು ಸ್ಮರಿಸಿದರು.
ವೇದಿಕೆಯಲ್ಲಿ ತಹಸೀಲ್ದಾರ ನಾಗರಾಜ ನಾಯ್ಕಡ, ಪ್ರಾಚಾರ್ಯೆ ವಿಜಯಲಕ್ಷ್ಮಿ ನಾಯ್ಕ, ಗಣೇಶ ಭಟ್ ಮಹೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.