ಹೊನ್ನಾವರ : ಮೂರು ವರ್ಷಗಳಿಂದ ವಸತಿ ಯೋಜನೆಯ ಫಲಾನುಭವಿಗಳಿಗೆ ಬಿಡುಗಡೆ ಆಗದೆ ಇರುವ ಅನುದಾನ ಬಿಡುಗಡೆ ಆಗದೆ ಇದ್ದು ಕಳೆದ ಒಂದು ವಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿರುವುದರಿಂದ 2016-17 ಮತ್ತು 2017-18 ಸಾಲಿನ ಆಶ್ರಯ ಯೋಜನಾ ಫಲಾನುಭವಿಗಳ ಪರವಾಗಿ ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಅಭಿನಂದನೆ ಸಲ್ಲಿಸಿದೆ.
ರಾಜ್ಯ ಸರ್ಕಾರ ಬಡವರಿಗೆ ವಾಸ್ತವ್ಯದ ಮನೆಗಳನ್ನು ನಿರ್ಮಿಸಿಕೊಳ್ಳಲು ವಿವಿಧ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಹಣ ಬಿಡುಗಡೆ ಮಾಡುತ್ತಿರುವುದು ಕಳೆದ ಹಲವು ದಶಕಗಳಿಂದ ಜಾರಿಗೆ ತಂದಿರುವ ಯೋಜನೆಯಾಗಿದೆ. ಹಿಂದಿನ ಸರ್ಕಾರ 2016-17 ಮತ್ತು 2017-18ನೇ ಸಾಲಿನಲ್ಲಿ ಬಸವ ಆಶ್ರಯ ಹಾಗೂ ಇನ್ನಿತರ ಯೋಜನೆ ಅಡಿಯಲ್ಲಿ ಸಾಕಷ್ಟು ಮನೆಗಳನ್ನು ಬಡವರಿಗೆ ನೀಡಲ್ಪಟ್ಟಿತ್ತು. ಇವರೆಲ್ಲರೂ ಸರ್ಕಾರದ ನಿಯಮಾವಳಿಯಂತೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿಕೊoಡು ಸರ್ಕಾರದ ಹಣ ನಂಬಿ ಸಾಲಮಾಡಿ ಕಷ್ಟಪಟ್ಟು ಮನೆ ನಿರ್ಮಿಸಿಕೊಂಡಿದ್ದರು.
ಆದರೆ ಕಳೆದ 3 ವರ್ಷಗಳಿಂದ ಬಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರ ಯಾವುದೇ ವಸತಿ ನಿಗಮದ ಹಣ ಬಿಡುಗಡೆ ಮಾಡದೇ ಇರುವುದು ಮನಗಂಡು ಕಳೆದ ವರ್ಷ ಫೆಬ್ರುವರಿ 1 ರಂದು `ಉತ್ತರ ಕನ್ನಡ ಜಿಲ್ಲಾ ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ’ ನೇತೃತ್ವದಲ್ಲಿ ಆಶ್ರಯ ಯೋಜನಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ಆನಂತರ ಹಣ ಬಿಡುಗಡೆಯಾಗದೇ ಇರುವುದರಿಂದ ಮಾರ್ಚ್ 15 ರಂದು ಎಲ್ಲಾ ಫಲಾನುಭವಿಗಳನ್ನು ಸೇರಿಸಿಕೊಂಡು ಸಾರ್ವಜನಿಕ ಮೆರವಣಿಗೆ ನಡೆಸಿ ತಹಸೀಲ್ದಾರ್ ಅವರ ಮೂಲಕ ಮಾನ್ಯ ರಾಜ್ಯಪಾಲರಿಗೆ, ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಮಾನ್ಯ ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಸಾರ್ವಜನಿಕವಾಗಿ ಮನವಿ ಮಾಡಿಕೊಳ್ಳಲಾಗಿತ್ತು.
ಕಳೆದ ಒಂದು ವಾರಗಳಿಂದ ತಾಲೂಕಿನಲ್ಲಿ ಹಲವಾರು ಆಶ್ರಯ ಯೋಜನಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆಯಾಗುತ್ತಿರುವುದು ಕಂಡುಬoದಿದೆ. ಆದ್ದರಿಂದ 2016-17 ಮತ್ತು 2017-18 ಸಾಲಿನ ಆಶ್ರಯ ಯೋಜನಾ ಫಲಾನುಭವಿಗಳ ಪರವಾಗಿ ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಸರ್ಕಾರವನ್ನು ಮತ್ತು ನಿಗಮವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಎಂದು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಶಂಕರ ಗೌಡ ಗುಣವಂತೆ ಅವರು ತಿಳಿಸಿದ್ದಾರೆ.