ಭಟ್ಕಳ: ಭಟ್ಕಳದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವಂತಹ ಕ್ರೀಡಾಪ್ರತಿಭೆಗಳಿದ್ದು ಅವುಗಳನ್ನು ಅನ್ವೇಷಿಸುವಂತಹ ಕಾರ್ಯ ನಡೆಯಬೇಕಿದೆ ಎಂದು ಯನೈಟೆಡ್ ಎಂಪವರ್ಮೆಂಟ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಸಿರಾಜ್ ಅಭಿಪ್ರಾಯಪಟ್ಟರು.
ಅವರು ರವಿವಾರ ಸಂಜೆ ಇಲ್ಲಿನ ಬಿಲಾಲ್ ಫಂಕ್ಷನ್ ಹಾಲ್ ನಲ್ಲಿ ಭಟ್ಕಳ ಮುಸ್ಲಿಮ್ ಯೂತ್ ಫೆಡರೇಷನ್ ನ ಸಹಯೋಗದೊಂದಿಗೆ ಆಯೋಜಿಸಿದ್ದ ಕ್ರೀಡಾ ಪ್ರತಿಭಾನ್ಚೇಷಣಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಟ್ಕಳದ ಮುಸ್ಲಿಮ್ ಸಮುದಾಯದ ಯುವಕರಲ್ಲಿ ರಾಜ್ಯಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವಂತಹ ಪ್ರತಿಭೆಗಳಿದ್ದು ಭಟ್ಕಳವನ್ನು ಬಿಟ್ಟು ಹೊರಬಂದಾಗ ಇದು ಸಾಧ್ಯವಾಗುತ್ತದೆ. ಭಟ್ಕಳದಲ್ಲೇ ಇದ್ದುಕೊಂಡು ಕ್ರೀಡಾಪ್ರತಿಭೆಗಳನ್ನು ಪೋಷಿಸಲು ಸಾಧ್ಯವಾಗದು. ಅದಕ್ಕಾಗಿ ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ರಾಜ್ಯಮಟ್ಟದಲ್ಲಿ ಕ್ರೀಡಾಪ್ರತಿಭೆಗಳನ್ನು ಗುರುತಿಸಿ ಅವರನ್ನು ರಾಷ್ಟ್ರಮಟ್ಟದ ಕ್ರೀಡೆಗಳಿಗೆ ಸಿದ್ದಗೊಳಿಸುತ್ತದೆ. ಪ್ರತಿಭೆ ಇದ್ದವರು ಎಲ್ಲಿಯೆ ಇರಲಿ ಅವರು ಮೇಲಕ್ಕೆ ಹೋಗುತ್ತಾರೆ ಆದರೆ ಅವರನ್ನು ಗುರುತಿಸುವಂತಹ ಕೆಲಸವಾಗಬೇಕು, ಈ ನಿಟ್ಟಿಲ್ಲಿ ಇಲ್ಲಿನ ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಇದರ ಸಹಯೋಗದೊಂದಿಗೆ ಭಟ್ಕಳದಲ್ಲಿ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ನಾವು ಮಾಡುತ್ತೇವೆ. ಇಲ್ಲಿನ ಯುವಕರು ಕ್ರೀಡೆಯನ್ನು ಪ್ರೀತಿಸುತ್ತಾರೆ. ತಮ್ಮ ಪ್ರತಿಭೆಗಳನ್ನು ಓರೆಗೆ ಹಚ್ಚಲು ಯುವಕರು ಉತ್ಸುಕರಾಗಿದ್ದು ಇದಕ್ಕಾಗಿ ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದರು.
ಇನ್ನೋರ್ವ ಅತಿಥಿ ರಾಜ್ಯ ವಾಲಿಬಾಲ್ ಆಯ್ಕೆ ಸಮಿತಿ ಸದಸ್ಯ ಇಬ್ರಾಹೀಮ್ ಗೋಳಿಕಟ್ಟೆ ಮಾತನಾಡಿ, ಕ್ರೀಡೆಗಳಿಂದ ಸಾಮಾಜಿಕ ಸಾಮರಸ್ಯ ಉಂಟಾಗುತ್ತದೆ. ಅಲ್ಲದೆ ಯುವಪೀಳಿಗೆ ಕೆಡುಕುಗಳಿಂದ ಮುಕ್ತವಾಗುತ್ತದೆ. ನಾವು ಈಗಾಗಲೆ ರಾಜ್ಯದ 9 ಜಿಲ್ಲೆಗಳಲ್ಲಿ ನಮ್ಮ ಅಸೋಸಿಯೇಶನ್ ಶಾಖೆಗಳನ್ನು ಆರಂಭಿಸಿದ್ದೇವೆ. ಭಟ್ಕಳದ ಮುಸ್ಲಿಮ್ ಯುತ್ ಫೆಡರೇಶನ್ ಸಹಕಾರದೊಂದಿಗೆ ಇಲ್ಲಿ ಶಾಖೆಯೊಂದು ಆರಂಭಿಸುವ ವಿಚಾರವಿದೆ ಎಂದ ಅವರು ಇದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದರು.
ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಮುಖಂಡ ಹಾಗೂ ಮಾಜಿ ಕ್ರೀಡಾಪಟು ಇನಾಯತುಲ್ಲಾ ಶಾಬಂದ್ರಿ ಈ ಸಂದರ್ಭದಲ್ಲಿ ಮಾತನಾಡಿದರು. ಮುಬಶ್ಶಿರ್ ಹಲ್ಲಾರೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.