ಅಂಕೋಲಾ : ನಗರದ ಕಾಕರಮಠದ ವಿಠೋಬ ಕೃಪಾ ಸಭಾ ಮಂಟಪದಲ್ಲಿ ಶಾರದಾಂಬಾ ಮಹಿಳಾ ಮಂಡಳದ 35 ನೇ ವಾರ್ಷಿಕ ಮಹಾಅಧಿವೇಶನ ಮತ್ತು ಅರಿಶಿನ ಕುಂಕುಮ ಕಾರ್ಯಕ್ರಮ ಶೃಂಗೇರಿ ಜಗದ್ಗುರುಗಳವರು ಅನುಗ್ರಹಿಸಿದ ವರದಿನ ಮಾಘಶುದ್ಧ ಪ್ರತಿಪದೆಯಂದು ಜರುಗಿತು.
ಅಧ್ಯಕ್ಷರಾಗಿ ಆಗಮಿಸಿದ ರಜನಿ ಅನಂತ ಶೆಟ್ಟಿ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ತತ್ವಣಗಿ ಹಳಿಯಾಳ ಇವರು ಮಾತನಾಡಿ, ಗಂಡು-ಹೆಣ್ಣು ಎಂಬ ಬೇಧ ಮಾಡದೇ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಯೋಗ, ಧ್ಯಾನದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು, ಗಳಿಸಿದರಲ್ಲಿ ಸ್ವಲ್ಪವನ್ನಾದರೂ ದಾನ ಮಾಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಪ್ರಮೀಳಾ ವಿಕಾಸ ಶೆಟ್ಟಿ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಗಿಹೊಸಳ್ಳಿ ಶಿರಸಿ ಇವರು ಮಾತನಾಡುತ್ತ ಮಾಘಶುದ್ಧ ಪ್ರತಿಪದೆಯ ಮಹತ್ವವನ್ನು ತಿಳಿಸುತ್ತ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಮುಂದೆ ಬರಬೇಕು ಮತ್ತು ಎಲ್ಲ ಉನ್ನತ ಹುದ್ದೆಯನ್ನು ಅಲಂಕರಿಸುವಂತಾಗಬೇಕು ಎಂದು ತಿಳಿಸಿದರು.
ಮಹಿಳಾ ಮಂಡಲದ ಸದಸ್ಯರು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದರು. ಮಹಿಳಾ ಮಂಡಳದ ಅಧ್ಯಕ್ಷೆ ಸುಧಾ ಗಣಪತಿ ಶೆಟ್ಟಿ ಎಲ್ಲರನ್ನು ಸ್ವಾಗತಿಸುತ್ತ ಪ್ರಾಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷೆ ಶ್ರೀಮತಿ ಶಾಲಿನಿ ಎನ್. ಕಾಳೆಯವರು ಸಂದೇಶವನ್ನು ವಾಚಿಸಿದರು. ಉಪಾಧ್ಯೆಕ್ಷೆ ಸಂಧ್ಯಾ ಪಿ. ಕಾಕರಮಠ ಮತ್ತು ಸವಿತಾ ಡಿ. ಶೆಟ್ಟಿ ಅತಿಥಿ, ಅಧ್ಯಕ್ಷರನ್ನು ಪರಿಚಯಿಸಿದರು. ಕಾರ್ಯದರ್ಶಿ ಜ್ಯೋತಿ ಕೆ. ಬಾಳೆಹಿತ್ತಲ್ ಜಮಾ-ಖರ್ಚು ಓದಿ ಒಪ್ಪಿಗೆ ಪಡೆದರು. ಸಹಕಾರ್ಯದರ್ಶಿ ಶುಭಲಕ್ಷ್ಮೀ ಜಿ. ಶೆಟ್ಟಿ ವರದಿ ವಾಚಿಸಿದರು. ಕೋಶಾಧ್ಯಕ್ಷೆ ವೀಣಾ ಆರ್. ವೈದ್ಯ ಪುಷ್ಪ ಗುಚ್ಛ ಸಮರ್ಪಿಸಿದರು.
ವಿವಿಧ ಕ್ರೀಡಾಸ್ಪರ್ಧೆ, ಪಾಕಶಾಸ್ತ್ರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿ, ಅಧ್ಯಕ್ಷರು ಬಹುಮಾನ ವಿತರಿಸಿದರು. ಬಹುಮಾನ ಪಡೆದವರ ಯಾದಿಯನ್ನು ಸದಸ್ಯೆ ರಮ್ಯಾ ಆರ್. ಶೆಟ್ಟಿ ವಾಚಿಸಿದರು. ಸದಸ್ಯೆ ಯೋಗಿತಾ ಎಸ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯೆ ಸ್ನೇಹಾ ವಿ. ಕೇಣಿ ವಂದನಾರ್ಪಣೆ ಸಲ್ಲಿಸಿದರು.
ದೇವಸ್ಥಾನದ ಅರ್ಚಕರಾದ ಸುರೇಶ್ಚಂದ್ರ ಬಾಟೆಯವರ ನೇತೃತ್ವದಲ್ಲಿ ವಿಠ್ಠಲ ಸದಾಶಿವ ದೇವರ ಪೂಜೆ ನೆರವೇರಿತು. ಕೊನೆಯಲ್ಲಿ ಸಮಾಜದ ಮಕ್ಕಳಿಂದ, ಮಹಿಳೆಯರಿಂದ ಮತ್ತು ಶಾರದಾಂಬಾ ಮಹಿಳಾ ಮಂಡಳದ ಸದಸ್ಯರಿಂದ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.