ಸಿದ್ದಾಪುರ: ಜಿಪಂ, ತಾಪಂ, ಪಶು ಸಂಗೋಪನಾ ಇಲಾಖೆ, ಹಾಲು ಉತ್ಪಾದಕರ ಸಹಕಾರಿ ಸಂಘ, ಗ್ರಾಪಂ ಬಿದ್ರಕಾನ, ಬೈಪ್ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ ಬಿದ್ರಕಾನ ಇವುಗಳ ಆಶ್ರಯದಲ್ಲಿ ಮಂಗಳವಾರ ತಾಲೂಕಿನ ಬಿದ್ರಕಾನ್ ನಲ್ಲಿ ಜಾನುವಾರು ಪ್ರದರ್ಶನವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಬಿದ್ರಕಾನ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಬದುಕಿನಲ್ಲಿ ಕುಟುಂಬ ಜೀವನಕ್ಕೆ ಹೈನುಗಾರಿಕೆ ಅತಿ ಮುಖ್ಯ. ಬದುಕಿನಲ್ಲಿ ಶ್ರಮ ಇಲ್ಲದೇ ಬದುಕಬೇಕು ಎನ್ನುವುದು ಸಾಧ್ಯ ಇಲ್ಲ. ಶ್ರಮದ ಜೀವನದಲ್ಲಿ ನಂಬಿಕೆ ಮುಖ್ಯ. ಅದರಂತೆ ಹೈನುಗಾರಿಕೆಯಲ್ಲಿ ನಂಬಿಕೆಯನ್ನಿಡಬೇಕು.
ಹೈನುಗಾರಿಕೆ ಮಾಡುವುದು ಎಂದರೆ ಹಾಲಿಗೆ ಮಾತ್ರ. ಇದು ನಮ್ಮ ಸಂಸ್ಕೃತಿ ಆಗಬೇಕು. ಅದರಲ್ಲಿಯೂ ನಮ್ಮ ದೇಶಿಯ ತಳಿಗಳ ಸಂಸರಕ್ಷಣೆ ಮಾಡಿದಂತಾಗುತ್ತದೆ. ಕೃಷಿ ಜೀವನಕ್ಕೆ ಹೈನುಗಾರಿಕೆ ಮುಖ್ಯ. ನಿರ್ಲಕ್ಷ, ಉದಾಸೀನತೆ ಮಾಡುವುದು ಸರಿಯಲ್ಲ. ಪ್ರತ್ಯೇಕ ಹಾಲು ಒಕ್ಕೂಟ ಮಾಡುವುದಕ್ಕೆ ಜಿಲ್ಲೆ ಮುಂಚೂಣಿಯಲ್ಲಿದೆ. ಒಕ್ಕೂಟ ಆಗಬೇಕಾದರೆ ಹಾಲಿನ ಉತ್ಪಾದನೆ ಆಗಬೇಕು. ಆ ಮೂಲಕ ಆರ್ಥಿಕವಾಗಿ ಸದೃಡರಾಗಲು ಸಾಧ್ಯ ಎಂದು ಹೇಳಿದರು.
ಬಿದ್ರಕಾನ ಗ್ರಾಪಂ ಅಧ್ಯಕ್ಷ ಮಂಜುನಾಥ ಬೀರಾ ಗೌಡ ಅಧ್ಯಕ್ಷತೆವಹಿಸಿದ್ದರು.ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಲ್.ಕೆ.ಹೆಗಡೆ ಉಳ್ಳಾನೆ,ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪರಮೇಶ್ವರ ಹೆಗಡೆ ಹುಲಿಮಕ್ಕಿ, ದೇವಸ್ಥಾನ ಕಮಿಟಿ ಅಧ್ಯಕ್ಷ ವೆಂಕಟರಮಣ ಹೆಗಡೆ, ಗ್ರಾಪಂ ಉಪಾಧ್ಯಕ್ಷೆ ಸರೋಜಾ ನಾಯ್ಕ, ಸದಸ್ಯ ಜಯಂತ ಹೆಗಡೆ, ಬಂಗಾರಿ ಚೌಡ ಹರಿಜನ್, ಡಾ.ನಂದಕುಮಾರ ಪೈ, ಡಾ.ರವಿ.ಹೆಗಡೆ ಹೊಂಡಗಾಸಿಗೆ ಇತರರು ಉಪಸ್ಥಿತರಿದ್ದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕಾನಂದ ಹೆಗಡೆ, ಗ್ರಾಪಂ ಕಾರ್ಯದರ್ಶಿ ಆರ್.ಬಿ.ಗೌಡ, ಡಾ.ಶ್ರೇಯಸ್ ರಾಜ ಕಾರ್ಯಕ್ರಮ ನಿರ್ವಹಿಸಿದರು.