ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸ್ವಚ್ಛತೆ ಕುರಿತು ಕಾರ್ಯನಿರ್ವಹಿಸಿ ಮನೆ ಮಾತಾಗಿರುವ ಕಾರವಾರ ಪಹರೆ ವೇದಿಕೆಯಿಂದ ಪ್ರೇರಣೆಗೊಂಡು ಹಿಲ್ಲೂರಿನ ಗ್ರಾಮಸ್ಥರು ಸಮಾನ ಮನಸ್ಕರಿರುವದಕ್ಕೆ ಮಹಿಳೆಯರು, ಹಿರಿಯರು, ಮಕ್ಕಳು ಸೇರಿಕೊಂಡು ಪಹರೆ ವೇದಿಕೆ ಹಿಲ್ಲೂರು ಘಟಕ ರಚಿಸಿಕೊಂಡು ಭಾನುವಾರ ಹಿಲ್ಲೂರಿನ ಪ್ಲಾಟ್ ಮನೆ, ಸರ್ಕಾರಿ ಹಾಸ್ಪಿಟಲ್ ಹತ್ತಿರ ಸ್ವಚ್ಛತೆ ನಡೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಕಾರಣರಾದರು.
ಹಿಲ್ಲೂರು ಪಹರೆ ಘಟಕದಲ್ಲಿ ಪಹರೆ ವೇದಿಕೆ ಉತ್ತರ ಕನ್ನಡ ಸಂಸ್ಥಾಪಕರು ಅಧ್ಯಕ್ಷ , ನ್ಯಾಯವಾದಿ ನಾಗರಾಜ ನಾಯಕ ಉಪಸ್ಥಿತರಿದ್ದು ಹಿಲ್ಲೂರು ಪಂಚಾಯಿತಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತವಾಗಬೇಕು. ಪ್ಲಾಸ್ಟಿಕ್ ಮಣ್ಣಾಗಲು ಸುಮಾರು 300 ವರ್ಷಗಳು ಬೇಕಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರದ ಸೂಕ್ಷ್ಮಾಣು ಜೀವಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮನುಷ್ಯ ಹಾಗೂ ಇತರ ಪ್ರಾಣಿಗಳ ಮೇಲೆ ಪ್ಲಾಸ್ಟಿಕ್ ಮಾರಕವಾಗುತ್ತದೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಪರಿಸರದ ಬಗ್ಗೆ ನಮ್ಮ ಮಾನಸಿಕತೆ ಬದಲಾಗಬೇಕು. ಮುಂದಿನ ಪೀಳಿಗೆಗೆ ನಮಗಿಂತ ಹೆಚ್ಚು ಆರೋಗ್ಯ ಹೊಂದಿ ಸದೃಢರಾಗಬೇಕು ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ, ಕೆ.ಡಿ.ಸಿ.ಸಿ ನಿರ್ದೇಶಕ ಬೀರಣ್ಣ ನಾಯಕ ಸ್ವತಃ ಗ್ರಾಮ ಪಂಚಾಯಿತಿ ಕಸದ ವಾಹನವನ್ನು ಚಲಾಯಿಸಿದರು. ನಮ್ಮ ಗ್ರಾಮ ನೈರ್ಮಲ್ಯ ಗ್ರಾಮವಾಗಿರಲು ಪ್ಲಾಸ್ಟಿಕ್ ಮುಕ್ತಗೊಳಿಸಲು ಊರಿನ ಸಾರ್ವಜನಿಕರು ಸಂಘ-ಸಂಸ್ಥೆಗಳು ಪಹರೆಯೊಂದಿಗೆ ಕೈ ಜೋಡಿಸಬೇಕು. ಪಹರೆಯ ಕಾರ್ಯಕ್ಕೆ ಗ್ರಾ.ಪಂ. ಸಂಪೂರ್ಣ ಬೆಂಬಲ ನೀಡುತ್ತಲಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿನ ಇತರೆ ಮಜರೆಗಳಲ್ಲಿ ಮುಂದಿನ ದಿನಗಳಿಗೆ ಸ್ವಚ್ಛತೆ ನಡೆಸಲಿ ಎಂದು ತಿಳಿಸಿದರು.
ಪಹರೆ ವೇದಿಕೆಯ ಅಂಕೋಲಾದ ಪ್ರಮುಖ ರಾಮಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಪಹರೆ ವೇದಿಕೆಯ ಕಾರ್ಯ ಚಟುವಟಿಕೆಗಳ ಬಗ್ಗೆ, ಈ ಸಂಘಟನೆಯ ನಿರಂತರತೆ ಬಗ್ಗೆ, ಪ್ರತಿವಾರ ಸ್ವಚ್ಛತೆಯನ್ನು ಕೈಗೊಳ್ಳವ ಹಾಗೆ ಅನುಸರಿಸಬೇಕಾದ ಸ್ವಯಂ ನಿಯಮಗಳ ಬಗ್ಗೆ, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಗ್ಗೆ ವಿವರವಾಗಿ ತಿಳಿಸಿದರು.
ಗ್ರಾ.ಪಂ. ಸದಸ್ಯರಾದ ಮಾಲಾ ಜಗದೀಶ ನಾಯಕ, ಪ್ರಮುಖರಾದ ಮಧುಕರ ನಾಯಕ, ಗೌರೀಶ ನಾಯಕ, ಗೋಪಾಲ ನಾಯಕ ಮಂಜುನಾಥ ನಾಯಕ, ಪ್ರವೀಣ ನಾಯಕ, ಗೌಸು, ಈಶ್ವರ, ಪ್ರಕಾಶ ನಾಯಕ, ಸುರೇಶ ನಾಯಕ, ಅಜೀತ ನಾಯಕ, ಸಂದೀಪ ನಾಯಕ, ಹಿರಿಯರಾದ ಮಂಗಿ ಗೌಡ, ಶಂಕರ ಪಟಗಾರ, ಗಣೇಶ ಪಟಗಾರ, ಬಾಬು ಹರಿಕಾಂತ, ಮಂಜುನಾಥ ನಾಯ್ಕ, ರಾಘು ಹಿಲ್ಲೂರಬೈಲ್ ಗ್ರಾ.ಪಂ. ಸದಸ್ಯ, ಗೌರಿ ಶಂಕರ, ಶಿವಾನಂದ ಗೌಡ, ಪಂಚಾಯ್ತಿ ಸಿಬ್ಬಂದಿ ಆನಂದು ಸಿಂದೆ ಹಾಗೂ ಅನೇಕ ಸಾರ್ವಜನಿಕರು ಭಾಗವಹಿಸಿದ್ದರು.